

ಬೆಳಗಾವಿ: ಜೀವನದುದ್ದಕ್ಕೂ ಕಣ್ಣುಗಳ ಆರೈಕೆ ಅತಿ ಮುಖ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಗ್ಲಾಕೋಮಾದಿಂದಾಗಿ ಅನೇಕ ಜನ ಕುರುಡುತನಕ್ಕೆ ತುತ್ತಾಗುತ್ತಿದ್ದಾರೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದರು ಈ ರೋಗದಿಂದ ಮುಕ್ತಿ ಪಡೆಯಬಹುದು ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಹೇಳಿದ್ದಾರೆ.
ಕೆಎಲ್‌ಇ ವಿಶ್ವವಿದ್ಯಾಲಯ, ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದಿಂದ ‘ವಿಶ್ವ ಗ್ಲಾಕೋಮಾ ದಿನದ’ ಅಂಗವಾಗಿ ಗುರುವಾರ ಕೆಎಲ್‌ಇಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಇಂದು 12 ಮಿಲಿಯನ್ ಜನ ಗ್ಲಾಕೋಮಾದಿಂದ ಬಳಲುತ್ತಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕಣ್ಣಿನ ತೊಂದರೆಗೆ ಒಳಗಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೂಕ್ತ ಜಾಗೃತಿಯಿಂದ ಜನರನ್ನು ಗ್ಲಾಕೋಮಾದಿಂದ ರಕ್ಷಿಸಬಹುದಾಗಿದೆ ಎಂದರು. ನೇತ್ರ ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಬುಬನಾಳೆ ಮಾತನಾಡಿ, ಒಂದು ವಾರ ಗ್ಲಾಕೋಮಾ ತಪಾಸಣೆ ಉಚಿತ ಶಿಬಿರ ಆಯೋಜಿಸಲಾಗಿದೆ.ಸಾರ್ವಜನಿಕರು ಲಾಭ ಪಡೆಯಬೇಕು ಎಂದರು. ಕಾಹೆರ್ ಕುಲಸಚಿವ ಡಾ.ವಿ.ಎ.ಕೋಠಿವಾಲೆ, ಡಾ.ಎಸ್.ಬಿ ಪಾಟೀಲ ಮಾತನಾಡಿದರು. ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ಆರಿಫ್ ಮಾಲ್ದಾರ್, ಡಾ.ಅರವಿಂದ ತೆನಗಿ, ಡಾ.ಸ್ಮಿತಾ ಪ್ರಭು, ಡಾ.ಭಾಗ್ಯಜ್ಯೋತಿ ಕುರಬೆಟ್ಟ, ಡಾ.ಪ್ರಗ್ಯಾ ಪೋರವಾಲ್, ಡಾ.ಚೇತನಾ, ಡಾ.ರೋಹಿಣಿ,ಡಾ.ಶರ್ವಾಣಿ, ಡಾ. ಫರಹೀನ ಮತ್ತಿತರರು ಇದ್ದರು.