ಚಿಕಿತ್ಸೆಗೆ ನಿರಾಕರಿಸಿದ ದರ್ಶನ್

Published on

ಬಳ್ಳಾರಿ : ಕೊಲೆ ಆರೋಪಿ ದರ್ಶನ್ ಬೆನ್ನು ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯದಕ್ಕೆ ಪತ್ನಿ ವಿಜಯಲಕ್ಷ್ಮೀ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿದವು.
ಕೇಂದ್ರ ಕಾರಾಗೃಹಕ್ಕೆ ಶುಕ್ರವಾರ ದರ್ಶನ್ ಭೇಟಿಗೆ ಆಗಮಿಸಿದ್ದ ಪತ್ನಿ ವಿಜಯಲಕ್ಷ್ಮೀ, ಸಹೋದರ ದಿನಕರ್ ತೂಗುದೀಪ, ಅಪ್ತರಾದ ಚಂದ್ರು, ಸುಶಾಂತ ನಾಯ್ಡು ಸೇರಿದಂತೆ ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಸೂಚಿಸಿದರೂ ಕೂಡ ದರ್ಶನ್ ಮೊಂಡುತನ ಪ್ರದರ್ಶಿಸಿದ್ದಾರೆ. ಜಿಲ್ಲೆಯಲ್ಲಿ ಚಿಕಿತ್ಸೆ ಬೇಡ, ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುವೆ ಎಂದು ಪತ್ನಿ ಹಾಗೂ ಅಪ್ತರ ಮುಂದೆ ದರ್ಶನ್ ಹೇಳಿದ್ದಾರೆ. ಇದೇ ವೇಳೆ ಬೆನ್ನು ನೋವಿನ ಸಮಸ್ಯೆ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಜಾಮೀನು ಪಡೆಯಿರಿ ಎಂಬುದಾಗಿ ಕೂಡ ತಿಳಿಸಿದ್ದಾರೆ. ಬಳಿಕ ಜಾಮೀನು ಅರ್ಜಿ ವಜಾ, ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆ ಹಾಗೂ ಆರೋಗ್ಯದ ಬಗ್ಗೆ ಪತ್ನಿಯೊಂದಿಗೆ ಅರ್ಧ ಗಂಟೆಕಾಲ ಚರ್ಚಿಸಿದರು. ಪ್ರತಿ ಬಾರಿಯಂತೆ ಬೇಕರಿಯ ತಿಂಡಿ ತಿನಿಸು, ಡ್ರೈಫ್ರೂಟ್ಸ್ ಹಾಗೂ ಬಟ್ಟೆಗಳ ಎರಡು ಬ್ಯಾಗ್‌ಗಳನ್ನು ದರ್ಶನ್‌ಗಾಗಿ ತಂದಿದ್ದರು. ಪತ್ನಿ ಹಾಗೂ ಅಪ್ತರ ಜತೆ ದರ್ಶನ್ ಮಾತುಕತೆ ನಡೆಸಿ ಮರಳಿ ಹೈ ಸೆಕ್ಯೂರಿಟಿ ಸೆಲ್‌ಗೆ ಬ್ಯಾಗ್‌ಗಳನ್ನು ತೆಗೆದುಕೊಂಡು ಹೊರಟರು. ಪತಿಯ ಆರೋಗ್ಯ ಸ್ಥಿತಿ ಕಂಡು ಪತ್ನಿ ವಿಜಯಲಕ್ಷ್ಮೀ ಜೈಲಿನಿಂದ ಹೊರಗಡೆ ಹೋಗುವ ವೇಳೆ ಕಣ್ಣೀರು ಹಾಕಿದರು ಎಂದು ಅಪ್ತ ಮೂಲಗಳು ತಿಳಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net