ಚಿಕಿತ್ಸೆಗೆ ನಾಗಮಾರಪಳ್ಳಿ ಆರ್ಥಿಕ ನೆರವು

chondi
Published on

ಬೀದರ್: ಕಿಡ್ನಿ ವೈಫಲ್ಯಕ್ಕೆ ಒಳಗಾದ ಬಡ ಯುವಕನೊಬ್ಬನಿಗೆ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು 50 ಸಾವಿರ ರೂ. ವೈಯಕ್ತಿಕ ನೆರವು ನೀಡಿದ್ದಾರೆ.

ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಚೊಂಡಿ ಗ್ರಾಮದ ಸಂತೋಷ ಮಾರುತಿ ಮನೆಗೆ ಗುರುವಾರ ಭೇಟಿ ನೀಡಿದ ನಾಗಮಾರಪಳ್ಳಿ ಧನಸಹಾಯ ಮಾಡಿದರು.ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಹಳ ಸಂಕಷ್ಟಕ್ಕೆ ಸಿಲುಕಿದ್ದೇನೆ. ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಬೇಕಿದೆ. ಒಂದು ಬಾರಿಯ ಡಯಾಲಿಸಿಸ್ ಗೆ ಕನಿಷ್ಠ 3 ಸಾವಿರದಿಂದ 4 ಸಾವಿರ ರೂ. ಖರ್ಚು ಬರುತ್ತಿದೆ. ಬಡವನಾದ ನನಗೆ ದುಬಾರಿ ವೈದ್ಯಕೀಯ ವೆಚ್ಚದ ಕಾರಣ ದಿಕ್ಕು ತೋಚದಂತಾಗಿದೆ ಎಂದು ಸಂತೋಷ ಅಳಲು ತೋಡಿಕೊಂಡ.

ವೈಯಕ್ತಿಕವಾಗಿ 50 ಸಾವಿರ ನೀಡಿ ಸರ್ಕಾರದಿಂದಲೂ ಸಾಧ್ಯವಾದ ನೆರವು ದೊರಕಿಸಿಕೊಡುವ ಭರವಸೆ ನೀಡಿದ ಸೂರ್ಯಕಾಂತ ಅವರಿಗೆ ಸಂತೋಷ ಹಾಗೂ ಜಾನಪದ ಕಲಾವಿದರಾದ ಅವರ ಮಾವ ಶಂಕರ ಚೊಂಡಿ ಕೃತಜ್ಞತೆ ಅರ್ಪಿಸಿದರು.ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವುದೇ ಮಾನವ ಧರ್ಮ. ಹೀಗಾಗಿ ಮಾನವೀಯ ನೆಲೆಯಲ್ಲಿ ಬಡ ಕುಟುಂಬಕ್ಕೆ ಧನಸಹಾಯ ಮಾಡಿದ್ದೇನೆ. ಚಿಕಿತ್ಸೆಗೆ ಸರ್ಕಾರದಿಂದ ಆರ್ಥಿಕ ನೆರವು ಸಹ ಕಲ್ಪಿಸಿಕೊಡಲು ಪ್ರಯತ್ನಿಸಲಿದ್ದೇನೆ ಎಂದು ನಾಗಮಾರಪಳ್ಳಿ ತಿಳಿಸಿದರು.

ನಾಗಮಾರಪಳ್ಳಿ ಫೌಂಡೇಷನ್ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕೋವಿಡ್ನಲ್ಲಿ ಒಂದು ರೂ.ನಲ್ಲಿ ಚಿಕಿತ್ಸೆ, ಕೋವಿಡ್ನಿಂದ ಮೃತಪಟ್ಟವರ ಗೌರವಯುತ ಅಂತ್ಯಸಂಸ್ಕಾರ, ಅಪಘಾತಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ಧನಸಹಾಯ, ವೈದ್ಯಕೀಯ ಚಿಕಿತ್ಸೆಗೆ ನೆರವು ಸೇರಿ ಹತ್ತು ಹಲವು ಕಾರ್ಯಗಳನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net