ಚಿಕಿತ್ಸೆಗೆ ತೊಂದರೆಯಾದಲ್ಲಿ ದೂರು ನೀಡಿ

DS Ravindra
Published on

ಚಿತ್ರದುರ್ಗ: ಚಿಕಿತ್ಸೆ, ಔಷಧಿ ಪೂರೈಕೆ ಸೇರಿ ಯಾವುದೇ ಸಮಸ್ಯೆಗಳಿದ್ದಲ್ಲಿ, ಸಾರ್ವಜನಿಕರು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ದೂರು ಸಲ್ಲಿಸಬಹುದು ಎಂದು ಡಿಎಸ್ ಡಾ.ರವೀಂದ್ರ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಜಿಲ್ಲಾಸ್ಪತ್ರೆಯ ಎಲ್ಲಾ ವಿಭಾಗಗಳ ತಜ್ಞ ವೈದ್ಯರು, ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಮಗು ಜನಿಸಿದರೆ, ರೋಗಿಗಳು ಗುಣವಾದರೆ, ಸಂತೋಷಕ್ಕೂ ಹಣ ನೀಡಬೇಡಿ. ಯಾರಾದರೂ ಕೇಳಿದರೆ, ನನ್ನ ಗಮನಕ್ಕೆ ತನ್ನಿ ಎಂದು ಕೋರಿದರು.

ಸಾರ್ವಜನಿಕರು ಆಸ್ಪತ್ರೆಗೆ ಭೇಟಿ ನೀಡುವಾಗ ಕಡ್ಡಾಯವಾಗಿ ಆಧಾರ್ ಕಾರ್ಡ್, ಪಡಿತರ ಚೀಟಿ ತರಬೇಕು. ಪ್ರತಿ ವಾರ್ಡ್‌ನಲ್ಲೂ 20ರಿಂದ 25 ರೋಗಿಗಳು ಇರುತ್ತಾರೆ. ಒಬ್ಬರ ಬಳಿ ನಾಲ್ವರು ಇರುತ್ತಾರೆ. ಹೀಗಾಗಿ ಕರ್ತವ್ಯಕ್ಕೆ ಬಹಳ ತೊಂದರೆ ಆಗುತ್ತಿದೆ. ಆದ್ದರಿಂದ ನಿತ್ಯ ಬೆಳಗ್ಗೆ 9ರೊಳಗೆ ಅಥವಾ ಮಧ್ಯಾಹ್ನ 12ರಿಂದ 2ರೊಳಗೆ ಭೇಟಿ ಮಾಡಿ. ಬೇಗ ಗುಣಪಡಿಸಲು ಸಹಕಾರಿಯಾಗಲಿದೆ ಎಂದರು.

ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 33 ವಿಭಾಗಗಳಿದ್ದು, ತಜ್ಞ ವೈದ್ಯರು ಹೊರತುಪಡಿಸಿ ತುರ್ತು ಚಿಕಿತ್ಸಾ ವಿಭಾಗದಲ್ಲಿ 7, ಗ್ರೂಪ್ ‘ಡಿ’ ಮತ್ತು ಶುಶ್ರೂಷಕರ ವಿಭಾಗದಲ್ಲಿ ತಲಾ 25 ಹುದ್ದೆಗಳ ಖಾಲಿ ಇವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಗುಣಮಟ್ಟದ ಸೇವೆ ನೀಡಲು ಸಂಕಲ್ಪ ಹೊಂದಿದ್ದೇವೆ. ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅಕ್ಟೋಬರ್‌ನಲ್ಲಿ 32,823 ಹೊರರೋಗಿಗಳು, 5,357 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 459 ಸಿಟಿ ಸ್ಕಾೃನ್ ಮಾಡಲಾಗಿದ್ದು, ಎಬಿಎಆರ್‌ಕೆ ಅಡಿ ಉಚಿತ ಸೇವೆ ನೀಡಲಾಗಿದೆ. ಇದೇ ಕಾರ್ಯಕ್ರಮದಡಿ 1,604 ಮಂದಿ ದಾಖಲಾಗಿದ್ದರು. ಜಿಲ್ಲೆಯಷ್ಟೇ ಅಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ವಿಜಯನಗರ ಸೇರಿ ವಿವಿಧೆಡೆಯ 2,500 ಮಂದಿಗೆ ಎಂಆರ್‌ಐ ಸ್ಕಾೃನ್ ಸೌಲಭ್ಯ ಒದಗಿಸಲಾಗಿದೆ. 170 ಜನರಲ್, 30 ಸಣ್ಣ, 122 ಮೂಳೆ ಮುರಿತದ ಶಸ್ತ್ರಚಿಕಿತ್ಸೆ ಮಾಡಿದ್ದು, ರಾಜ್ಯದಲ್ಲೇ 3ನೇ ಸ್ಥಾನದಲ್ಲಿದೆ. ರಕ್ತನಿಧಿ ಕೇಂದ್ರದಲ್ಲಿ 530 ಯೂನಿಟ್ ರಕ್ತ ಸಂಗ್ರಹಿಸಿ 439 ಯುನಿಟ್ ಅಷ್ಟು ಅರ್ಹರಿಗೆ ವಿತರಿಸಲಾಗಿದೆ. 653 ಹೆರಿಗೆ ಪೈಕಿ 189 ಸಾಮಾನ್ಯ, 464 ಸಿಜೇರಿಯನ್ ಮಾಡಲಾಗಿದೆ. ವಿವಿಧ ಕಾರಣಗಳಿಗಾಗಿ ಅಪಾಯ ಸ್ಥಿತಿಯಲ್ಲಿನ 250ಕ್ಕೂ ಹೆಚ್ಚು ಶಿಶುಗಳ ಜೀವ ರಕ್ಷಿಸಲಾಗಿದೆ ಎಂದು ವಿವರಿಸಿದರು.

ಹಾವು ಕಚ್ಚಿದ 52 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷ ಸೇವಿಸಿದ 133 ಪ್ರಕರಣಗಳ ಪೈಕಿ ತಡವಾಗಿ ಬಂದ 1ರಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net