

ಚಿತ್ರದುರ್ಗ: ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದೆ, ತಾಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗೆ, ಜಿಲ್ಲಾಸ್ಪತ್ರೆಯಿಂದ ಪರಸ್ಥಳಗಳಿಗೆ ರೆಫರ್ ಮಾಡುವ ಸರ್ಕಾರಿ ಆಸ್ಪತ್ರೆಗಳ ವೈದ್ಯರ ನಡೆಗೆ ಸೋಮವಾರ ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಯಿತು.
ಅನುಪಾಲನ ವರದಿಯ ಚರ್ಚೆ ವೇಳೆ, ಬಡ ರೋಗಿಗಳಿಗೆ ಚಿಕಿತ್ಸೆ ನೀಡದೆ ಬಳ್ಳಾರಿ, ದಾವಣಗೆರೆ, ಮಂಗಳೂರು ಮತ್ತಿರೆಡೆ ಕಳಿಸುವುದು ಯಾಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಡಾ.ಎಂ.ಚಂದ್ರಪ್ಪ ಮತ್ತಿತರರು ಪ್ರಶ್ನಿಸಿದರು.
ಹೊಳಲ್ಕೆರೆ ತಾಲೂಕು ಬಿ.ದುರ್ಗ ಸೇರಿ ಹಲವು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದರೂ ಏಕೆ ಭರ್ತಿ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತ ರಿಸಿದ ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್, ಭರ್ತಿಗೆ ಕ್ರಮ ಕೈಗೊಂಡಿದ್ದರೂ ವೈದ್ಯರು ಬರುತ್ತಿಲ್ಲ ಎಂದರು.
ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹಿರೇಗುಂಟನೂರು, ಕ್ಯಾಸಾಪುರದಲ್ಲಿ ವೈದ್ಯರು ಆಸ್ಪತ್ರೆಗೆ ಸರಿಯಾಗಿ ಬರುತ್ತಿಲ್ಲವೆಂದು ಡಿಎಚ್‌ಒಗೆ ತಿಳಿಸಿದರು.
ಆಯಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ರೆಫರ್ ಅಗತ್ಯವಿದೆ ಎಂ ದು ಡಿಎಸ್ ಡಾ.ಎಸ್‌ಪಿ.ರವೀಂದ್ರ ತಿಳಿಸಿದರು. ಡಯಾಲಿಸಿಸ್‌ನ ಸೂಕ್ತ ನಿರ್ವಹಣೆ ಮಾಡುವಂತೆ ಚಂದ್ರಪ್ಪ ತಾಕೀತು ಮಾಡಿದರು.
ಹಿರಿಯೂರು ನೂತನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಅಲ್ಲಿಯೇ ತಾಯಿ ಮಕ್ಕಳು ಆಸ್ಪತ್ರೆ ಇರಬೇಕೆಂದು ಸಚಿವರು ಹೇಳಿದರು.
ಎಂಎಲ್‌ಸಿ ಶ್ರೀನಿವಾಸ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಣ್ಣ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರು, ಅಧಿಕಾರಿಗಳಿದ್ದರು.
ಅಕ್ರಮ ಅದಿರು ಸಾಗಣೆ ವಿರುದ್ಧ ಕ್ರಮ
ಭೀಮಸಮುದ್ರ ಬಳಿ ಪಟ್ಟಾ ಜಮೀನಿನಲ್ಲಿದ್ದ ಕಬ್ಬಿಣದ ಅದಿರು ಅಕ್ರಮ ಸಾಗಿಸಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿ ಸುವಂತೆ ಡಿಸಿ ಟಿ.ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಆರ್‌ಟಿಒ ಅಧಿಕಾರಿಗಳಿಗೆ ಸುಧಾಕರ್ ನಿರ್ದೇಶಿಸಿದರು. ಈ ಬಗ್ಗೆ ಸಮಗ್ರ ವರದಿ ನೀಡುವಂತೆಯೂ ಡಿಸಿಗೆ ಸೂಚಿಸಿದರು.
ವಿಷಯ ಪ್ರಸ್ತಾಪಿಸಿದ ಚಂದ್ರಪ್ಪ 30 ಕ್ಕೂ ಹೆಚ್ಚು ಲಾರಿಗಳಲ್ಲಿ ಅದಿರು ಸಾಗಿಸುವ ಪ್ರಯತ್ನವಾಗಿದ್ದರೂ ಸುಮ್ಮನಿದ್ದೀರಿ ಎಂದು ಇಲಾಖೆ ಉಪನಿರ್ದೇಶಕ ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಧಿಕಾರಿ ಸಮಜಾಯಿಷಿ ನೀಡಿದರಾದರೂ ಅದಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು. ಸರ್ಕಾರಕ್ಕೆ ಕೋಟ್ಯಂತರ ರೂ.ನಷ್ಟವಾಗುತ್ತಿದೆ. ಇದನ್ನು ತಪ್ಪಿಸಬೇಕು ಹಾಗೂ ತಪ್ಪಿಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.
ವಾಹನ ನಿಲುಗಡೆಗೆ ಅವಕಾಶ ಬೇಡ
ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಮುರುಘಾಮಠದವರೆಗೆ ರಸ್ತೆ ವಿಸ್ತರಣೆಯಾಗಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪು ನೋಡಿದ್ದೀರಾ ಎಂದು ಅಧಿಕಾರಿಗಳನ್ನು ಚಂದ್ರಪ್ಪ ಪ್ರಶ್ನಿಸಿದರು.
ಬಿ.ಡಿ. ರಸ್ತೆ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಬೇಡ. ಗಾಂಧಿ ಸರ್ಕಲ್ ಬಳಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೊಳಲ್ಕೆರೆ ಮಿನಿ ವಿಧಾನಸೌಧ ಕಾಮಗಾರಿ ಹಾಗೂ ಬಹು ಗ್ರಾಮ ಕುಡಿವ ನೀರು ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದರಲ್ಲದೇ ಗಂಗಾ ಕಲ್ಯಾಣದಡಿ ಕೊಳವೆಬಾವಿಗೆ ಹಣ ಕೇಳಿದರೆ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ತರಬೇಕಾದೀತು ಎಂದು ಎಚ್ಚರಿಸಿದರು.
ಶಿಷ್ಟಾಚಾರ ಪಾಲಿಸಿ
ಅಧಿಕಾರಿಗಳು ಶಿಷ್ಟಾಚಾರ ಪಾಲಿಸಬೇಕು ಎಂದು ಶಾಸಕ ವೀರೇಂದ್ರ ಪಪ್ಪಿ ಕಿವಿಮಾತು ಹೇಳಿದರು. ಇಂಜಿನಿಯರ್, ಸಿಬ್ಬಂದಿಯನ್ನು ಗುತ್ತಿಗೆದಾರನೊಬ್ಬ ಬೆದರಿಸಿದ್ದರ ವಿರುದ್ಧ ಯಾಕೆ ದೂರು ಕೊಟ್ಟಿಲ್ಲವೆಂದು ಅವರು ಗ್ರಾಮೀಣ ಕುಡಿವ ನೀರು ನೈರ್ಮಲ್ಯ ಇಲಾಖೆ ಇಇ ಬಸವನಗೌಡ ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿರುವ ಕ್ರೈಸ್ ವಸತಿ ಶಾಲೆಗಳಲ್ಲಿ ಬಿಸಿ ನೀರಿನ ಸಮಸ್ಯೆ ಇದೆ, ಪರಿಶೀಲಿಸಿದ್ದೀರಾ ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಕಾಲ, ಕಾಲಕ್ಕೆ ವಸತಿ ಶಾಲೆಗಳಿಗೆ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸುವಂತೆ ಸಿಇಒ ಎಸ್.ಜೆ.ಸೋಮಶೇಖರ್, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ, ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಲ್ಲಾಪುರ ಕೆರೆ, ಅರಸನ ಕೆರೆ ಸಹಿತ ನಗರದ ಸಮಸ್ಯೆಗಳಿಗೆ ಪ್ರತ್ಯೇಕ ಸಭೆ ನಡೆಸುವಂತೆ ಸಚಿವರು ಡಿಸಿಗೆ ನಿರ್ದೇಶಿಸಿದರು.