

ಆಲೂರು/ಸಕಲೇಶಪುರ: ಗಾಯದಿಂದ ಬಳಲುತ್ತಿದ್ದ ಭೀಮ ಎಂಬ ಕಾಡಾನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಗುರುವಾರ ಆಲೂರು ತಾಲೂಕಿನ ಮಗ್ಗೆ ಹೋಬಳಿಯ ಹಳಿಯೂರು ಗ್ರಾಮದಲ್ಲಿ ನಡೆಸಿದ ಕಾರ್ಯಾಚರಣೆಯ ವೇಳೆ ಆನೆ ದಾಳಿಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದಾರೆ.
ಆಲೂರು ತಾಲೂಕಿನ ಹೊನ್ನವಳ್ಳಿ ಗ್ರಾಮದ ಶಾರ್ಪ್ ಶೂಟರ್ ವೆಂಕಟೇಶ್ (63) ಮೃತ ವ್ಯಕ್ತಿ.
ಕಳೆದ 20 ದಿನಗಳ ಹಿಂದೆ ಎರಡು ಆನೆಗಳ ನಡುವೆ ನಡುವೆ ನಡೆದ ಕಾಳಗದಿಂದಾಗಿ ಭೀಮ ಎಂಬ ಆನೆಗೆ ತೀವ್ರತರವಾದ ಗಾಯಗಳಾಗಿದ್ದು, ಇದು ಉಲ್ಬಣಗೊಂಡು ನರಳಾಡುತ್ತಿತ್ತು. ಇದಕ್ಕೆ ಚಿಕಿತ್ಸೆ ಕೊಡಿಸಲು ತಜ್ಞರು ಮತ್ತು ಎರಡು ಸಾಕಣೆಗಳ ಮೂಲಕ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಆಲೂರು ತಾಲೂಕಿನ ಹಳಿಯೂರು ಗ್ರಾಮದಲ್ಲಿ ಆರಂಭಿಸಿತು.
ಗಾಯದಿಂದ ನರಳುತ್ತಿದ್ದ ಭೀಮನ ಚಲನವಲನವನ್ನು ಗಮನಿಸಿ ವೆಂಕಟೇಶ್ ಅವರು ಒಂದು ಅರಿವಳಿಕೆ ಮದ್ದು ಹಾರಿಸಿದ್ದಾರೆ. ಇದರಿಂದ ಕೋಪಗೊಂಡು ಆನೆ ಘೀಳಿಡುತ್ತಾ ಓಡಾಡಲು ಆರಂಭಿಸಿದೆ. ಇದರಿಂದ ಭಯಭೀತರಾಗಿ ಎಲ್ಲರೂ ಓಡಿ ಹೋಗಿದ್ದಾರೆ. ವೆಂಕಟೇಶ್ ಅವರು ಕೂಡ ಓಡಲು ಯತ್ನಿಸಿದ್ದಾರೆ. ಆದರೆ ಸಮೀಪದಲ್ಲೇ ಇದ್ದುದ್ದರಿಂದ ಏಕಾಏಕಿ ದಾಳಿ ನಡೆಸಿ ವೆಂಕಟೇಶ್ ಅವರನ್ನು ಸೊಂಡಲು ಮತ್ತು ಕಾಲಿನಿಂದ ತೀವ್ರತರವಾಗಿ ದಾಳಿ ಮಾಡಿದೆ.
ಅಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ನಂತರ ಗಾಳಿಯಲ್ಲಿ ಗುಂಡು ಹಾರಿಸಿದರು ಕೂಡ ಆನೆ ವೆಂಕಟೇಶ್ ಅವರನ್ನು ಬಿಡಲಿಲ್ಲ. ಸ್ಥಳೀಯರು ಮತ್ತು ಸಾರ್ವಜನಿಕರು ಕಿರುಚಾಡಿ ಕೂಗಾಡಿದಾಗ ಆನೆ ವೆಂಕಟೇಶ್ ಅವರನ್ನು ಬಿಟ್ಟು ದೂರ ಓಡಿಹೋಗಿದೆ. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಪೊದೆಯಲ್ಲಿ ಸಿಲುಕಿದ್ದ ವೆಂಕಟೇಶ್ ಅವರನ್ನು ಹೊರೆ ತೆಗೆದು ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು.
ಮೊದಲು ರಾಯರುಕೊಪ್ಪಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸಕಲೇಶಪುರ ಮಾಜಿ ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎಚ್.ಎಂ. ವಿಶ್ವನಾಥ್ ಸೇರಿದಂತೆ ಅಧಿಕಾರಿಗಳು ಹಾಗೂ ಸ್ಥಳೀಯರು ಆಸ್ಪತ್ರೆಗೆ ಜಮಾಯಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲ ಮುಟ್ಟಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಸಹೋದ್ಯೋಗಿಯನ್ನು ಕಳೆದುಕೊಂಡು ಕಣ್ಣೀರಿಟ್ಟರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಅರಣ್ಯ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ನಂತರ ಅವರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಯಿತು. ನಾಳೆ ಮಧ್ಯಾಹ್ನ ವೆಂಕಟೇಶ್ ಅಂತ್ಯಕ್ರಿಯೆ ನಡೆಯಲಿದೆ.
ಕೈ ಕೊಟ್ಟ ಆ್ಯಂಬುಲೆನ್ಸ್
ಕಾರ್ಯಾಚರಣೆಗೂ ಮೊದಲೇ ಆ್ಯಂಬುಲೆನ್ಸ್ ಅನ್ನು ಕೂಡ ವ್ಯವಸ್ಥೆ ಮಾಡಲಾಗಿತ್ತು. ಆನೆ ದಾಳಿಯಿಂದ ನರಳಾಡುತ್ತಿದ್ದ ವೆಂಕಟೇಶ್ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಮಲಗಿಸಿ ಆಸ್ಪತ್ರೆಗೆ ಸಾಗಿಸಲು ಹೊರಟಾಗ ಆ್ಯಂಬುಲೆನ್ಸ್ ಅರ್ಧದಲ್ಲಿ ಕೈಕೊಟ್ಟಿದೆ. ಬಳಿಕ ಅರಣ್ಯ ಇಲಾಖೆಯ ವಾಹನದಲ್ಲಿ ವೆಂಕಟೇಶ್ ಅವರನ್ನು ಕರೆದುಕೊಂಡು ಹೋಗಲಾಯಿತು.
ಘಾಸಿಗೊಳಿಸಿದ್ದೆ ದುರ್ಘಟನೆಗೆ ಕಾರಣ?
ಚಿಕಿತ್ಸೆ ನೀಡಲು ಬಯಲು ಪ್ರದೇಶ ಉತ್ತಮ ಎಂಬ ಕಾರಣಕ್ಕೆ ಕಾಡಿನಲ್ಲಿದ್ದ ಕಾಡಾನೆಯನ್ನು ಬಯಲಿಗೆ ಬರುವಂತೆ ಮಾಡಲು ಪಟಾಕಿ ಸಿಡಿಸಿ, ಕೂಗಾಟ, ಚೀರಾಟ ಮಾಡಲಾಯಿತು. ಇದರಿಂದ ಘಾಸಿಕೊಂಡಿದ್ದ ಕಾಡಾನೆ ಕೋಪಗೊಂಡಿದೆ. ಸೌಮ್ಯ ಸ್ವಭಾವದ ಆನೆಯಾದ್ದರಿಂದ ದಾಳಿ ಮಾಡುವುದಿಲ್ಲ ಎಂಬ ಲೆಕ್ಕಾಚಾರ ಹಾಕಿದ ಸಿಬ್ಬಂದಿ ಆನೆ ಸಮೀಪದಲ್ಲಿ ನಿಂತು ಅರಿವಳಿಕೆ ಮದ್ದು ಹಾರಿಸಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಆನೆ ಏಕಾಏಕಿ ದಾಳಿ ನಡೆಸಿದೆ.