

ಚಿಂತಾಮಣಿ : ಬಯಲುಸೀಮೆ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೇಂದ್ರ ಸರ್ಕಾರದ One District One Green Champion’ಪ್ರಶಸ್ತಿಗೆ ಭಾಜನವಾಗಿದೆ.
ಸ್ವಚ್ಛತೆ, ನೈರ್ಮಲ್ಯ, ನೀರು, ಗಿಡ-ಮರಗಳ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಸೇರಿ ಸಾಮಾಜಿಕ ಇತರ ಸೇವಾ ಕಾರ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ ಕಾಲೇಜುಗಳಿಗೆ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯವು ಮಹಾತ್ಮಗಾಂಧಿ ನ್ಯಾಷನಲ್ ಕೌನ್ಸಿಲ್ ಆಫ್ ರೂರಲ್ ಎಜುಕೇಷನ್ (ಎಂಜಿಎನ್‌ಸಿಆರ್‌ಇ) ವಿಭಾಗದ ಮೂಲಕ ‘One District One Green Champion’ ಪ್ರಶಸ್ತಿ ನೀಡುತ್ತಿದೆ. ಪ್ರಸಕ್ತ 2020-21ನೇ ಸಾಲಿನಲ್ಲಿ ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭಾಜನವಾಗಿದೆ.
ವಿವಿಧ ರಾಜ್ಯಗಳ ಸುಮಾರು 400 ಕಾಲೇಜುಗಳ ಪಟ್ಟಿಯನ್ನು ಪ್ರಶಸ್ತಿಗೆ ತಯಾರಿಸಲಾಗಿತ್ತು. ಈ ಪೈಕಿ ಚಿಂತಾಮಣಿಯ ಕಾಲೇಜು ಉತ್ತಮ ನಿರ್ವಹಣೆಗೆ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಶಾಶ್ವತ ನೀರಾವರಿ ಸೌಲಭ್ಯಗಳಿಲ್ಲದ ಜಿಲ್ಲೆಯಲ್ಲಿ ಮಳೆ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಚಿಂತಾಮಣಿ ಕಾಲೇಜಿನ ಎನ್‌ಎಸ್‌ಎಸ್ ವಿಭಾಗದ ವಿದ್ಯಾರ್ಥಿಗಳು ನೀರಿನ ಸಂರಕ್ಷಣೆ, ಸ್ವಚ್ಛತೆ, ಸೋಲಾರ್ ಎಲ್‌ಇಡಿ ಲೈಟ್‌ಗಳ ಅಳವಡಿಕೆ ಸೇರಿ ಸಾಮಾಜಿಕ ಸೇವಾ ಚಟುವಟಿಕೆ ಕೈಗೊಳ್ಳುವಿಕೆ ಮತ್ತು ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವಲ್ಲಿ ಮುಂಚೂಣಿಯಲ್ಲಿದ್ದು, ಕೇಂದ್ರ ಸರ್ಕಾರದ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಜಿಲ್ಲೆಯಲ್ಲಿ ಪ್ರಶಸ್ತಿ ಸಂಭ್ರಮ: ಚಿಂತಾಮಣಿ ಕಾಲೇಜಿನ ಗ್ರೀನ್ ಚಾಂಪಿಯನ್ ಪ್ರಶಸ್ತಿ ಸಾಧನೆಗೆ ಜಿಲ್ಲೆಯಲ್ಲಿ ಮೆಚ್ಚುಗೆೆ ವ್ಯಕ್ತವಾಗಿದೆ. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಡಿಯೋ ಸಂವಾದದಲ್ಲಿ ಕಾಲೇಜಿನ ಉತ್ತಮ ಕಾರ್ಯವೈಖರಿಯ ಸಾಧನೆಗೆ ಜಿಲ್ಲಾಧಿಕಾರಿ ಆರ್.ಲತಾ ಸಂತಸ ವ್ಯಕ್ತಪಡಿಸಿದರು. ಎಂಜಿಎನ್‌ಸಿಆರ್‌ಇ ಅಧ್ಯಕ್ಷ ಡಾ.ಪ್ರಸನ್ನಕುಮಾರ್, ಸಂಯೋಜಕ ಮೆಲ್ವಿಯನ್ ನೂರ್ಹಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲೆ ಡಾ.ಕೆ.ಶಾರದಾ ಮತ್ತಿತರರು ಇದ್ದರು.