ಚಿಂತನೆಗಳು ಉತ್ತಮ ಸಮಾಜಕ್ಕೆ ದಾರಿ ದೀಪ

Published on

ಹನೂರು: ಡಾ.ಶಿವಕುಮಾರ ಸ್ವಾಮೀಜಿ ಅವರ ಆದರ್ಶ ಹಾಗೂ ಬದುಕಿನ ಚಿಂತನೆಗಳು ಉತ್ತಮ ಸಮಾಜಕ್ಕೆ ದಾರಿ ದೀಪ. ಆದ್ದರಿಂದ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್ ತಿಳಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಮಂಗಳವಾರ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಕಾಯಕವೇ ಕೈಲಾಸ ಹಾಗೂ ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರು 1930ರಲ್ಲಿ ಸಿದ್ಧಗಂಗಾ ಮಠದ ಜವಾಬ್ದಾರಿ ಹೊತ್ತರು. ಮಠದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮದ ಹಾಗೂ ಸಮಾಜದ ಏಳಿಗೆಗೆ ಶ್ರಮಿಸಿದ್ದರು. ಬಸವಾದಿ ಶರಣರ ತತ್ವಾದರ್ಶಗಳೇ ಇವರ ಉಸಿರಾಗಿತ್ತು. ದೇಶ ಹಾಗೂ ಸಮಾಜದ ಪ್ರಗತಿಯ ಬಗ್ಗೆ ಕಳಕಳಿ ಹೊಂದಿದ್ದ ಶ್ರೀಗಳು ಮುಂದಿನ ಪೀಳಿಗೆಯ ಬೆಳವಣಿಗೆಗೆ ಪಣ ತೊಟ್ಟಿದ್ದರು. ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದರ ಜತೆಗೆ ಬಡ ಮಕ್ಕಳಿಗೆ ಆಶ್ರಯದಾತರಾಗಿದ್ದರು. ತ್ರಿವಿಧ ದಾಸೋಹವನ್ನು ನಡೆಸುತ್ತಾ ಬಂದಿದ್ದು, ವಿಶ್ವವ್ಯಾಪಿ ಜನಮನ್ನಣೆ ಗಳಿಸಿದ್ದರು. ನಡೆದಾಡುವ ದೇವರು ಎಂದು ಖ್ಯಾತಿ ಗಳಿಸಿದ್ದರು. ಆದ್ದರಿಂದ ಇವರ ಆದರ್ಶ ಉತ್ತಮ ಸಮಾಜಕ್ಕೆ ದಾರಿ ದೀಪವಾಗಿದ್ದು, ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು.

ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ, ನಿರ್ದೇಕರಾದ ಆನಾಪುರ ಉಮೇಶ್, ಕಣ್ಣೂರು ಬಸವರಾಜಪ್ಪ, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಪಪಂ ಸದಸ್ಯ ಬಸವರಾಜು, ಮುಖಂಡರಾದ ರಾಜಶೇಖರಮೂರ್ತಿ, ಕುಮಾರ್, ಕಣ್ಣೂರು ನಾಗೇಂದ್ರ, ಶಾಂತಮೂರ್ತಿ, ಜಗದೀಶ್, ಕಿರಣ್ ದಲಿತ್, ಪುಟ್ಟರಾಜು, ಮಲ್ಲು ಇತರರಿದ್ದರು. ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net