

ಹನೂರು: ಹನೂರಿನ ಶ್ರೀ ವಿವೇಕಾನಂದ ಶಿಕ್ಷಸಣ ಸಂಸ್ಥೆಯ ಆವರಣದಲ್ಲಿ ಸೋಮವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ 77ನೇ ಸ್ವಾತಂತ್ರೊೃೀತ್ಸವದ ಅಂಗವಾಗಿ ಆಯೋಜಿಸಿದ್ದ ಕನ್ನಡ ಪದಬಂಧ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾದ ಪದಬಂಧ ಸ್ಪರ್ಧೆಯು 11.30ಕ್ಕೆ ಮುಕ್ತಾಯಗೊಂಡಿತು. ವಿವಿಧ ಕಾಲೇಜಿನಿಂದ 70 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸರಿ ಉತ್ತರ ಬರೆದ ಬಂಡಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀ, ವಿದ್ಯಾ, ಹನೂರಿನ ಶ್ರೀ ವಿವೇಕಾನಂದ ಪಪೂ ಕಾಲೇಜಿನ ಗೌತಮಿ, ಧನಲಕ್ಷ್ಮೀ ಹಾಗೂ ನೇತ್ರಾವತಿ ಅವರಿಗೆ ತಲಾ 1 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರ ವಿತರಿಸಲಾಯಿತು. ಉಪನ್ಯಾಸಕಿ ಮಧು ಕಾರ್ಯಕ್ರಮದ ನಿರೂಪಿಡಿದರು. ಉಪನ್ಯಾಸಕರಾದ ರಾಜೇಂದ್ರಪ್ರಸಾದ್, ರಾಜೇಶ್ ಸಹಕಾರ ನೀಡಿದರು.
ಇನ್ನಷ್ಟು ಕಾರ್ಯಕ್ರಮಗಳು ಹೆಚ್ಚಾಗಲಿ: ಸ್ಪರ್ಧೆಯ ಬಳಿಕ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಸಮಾಜ ಸೇವಕ ರಿಷಿಗೌಡ (ಮಹದೇವಸ್ವಾಮಿ) ಉದ್ಘಾಟಿಸಿ ಮಾತನಾಡಿ, ಚಾ.ನಗರ ಜನಪದ ಕಲೆಗಳ ತವರೂರು. ಹನೂರು ಭಾಗದಲ್ಲಿ ಜನಪದ ಕಲೆ ಹಾಸುಹೊಕ್ಕಾಗಿದೆ. ಸಾಮಾಜಿಕ ಕಳಕಳಿ ಹೊಂದಿರುವ ವಿಜಯವಾಣಿ ದಿನಪತ್ರಿಕೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಸುತ್ತಿರುವುದು ಶ್ಲಾಘನೀಯ. ಇದೀಗ ವಿದ್ಯಾರ್ಥಿಗಳಿಗೆ ಪದಬಂಧ ಸ್ಪರ್ಧೆ ಆಯೋಜಿಸಿರುವುದು ಮೆಚ್ಚುವಂತಹದ್ದು. ಇದರಿಂದ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಅನುಕೂಲವಾಗಲಿದೆ. ಪತ್ರಿಕೆ ವತಿಯಿಂದ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಬೇಕು ಎಂದು ಶುಭ ಹಾರೈಸಿದರು.
ಬಿಇಒ ಶಿವರಾಜು ಮಾತನಾಡಿ, ಪತ್ರಿಕೆ ಸಮಾಜದ ಶಿಕ್ಷಕ. ಹಾಗಾಗಿ ಉತ್ತಮ ಸಮಾಜಕ್ಕೆ ದಾರಿದೀಪವಾಗಿದ್ದು, ಜನರು ಸರಿ ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಈ ದಿಸೆಯಲ್ಲಿ ವಿಜಯವಾಣಿ ಬದುಕಿನ ಎಲ್ಲ ಮಜಲುಗಳನ್ನು ತಿಳಿಸುವಂತಹ ಪತ್ರಿಕೆಯಾಗಿದೆ. ವಿದ್ಯಾರ್ಥಿಮಿತ್ರ ಪತ್ರಿಕೆ ವಿದ್ಯಾರ್ಥಿಗಳ ಜ್ಞಾರ್ನಾನೆಗೆ, ಸ್ಪರ್ಧಾತ್ಮಕ ಪರೀಕ್ಷೆಗೆ ಹಾಗೂ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದ್ದು, ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಮಾರ್ಗದರ್ಶಿಯಾಗಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜವಾದ್ ಆಹಮದ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ, ಆಶುಭಾಷಣ ಹಾಗೂ ಇನ್ನಿತರ ಸ್ಪರ್ಧೆಗಳು ನಡೆಯುತ್ತಿರುವುದು ಸಾಮಾನ್ಯ. ಆದರೆ ಪದಬಂಧ ಸ್ಪರ್ಧೆಯನ್ನು ಆಯೋಜಿಸಿರುವುದು ಸ್ಪರ್ಧಾತ್ಮಕ ಯುಗದಲ್ಲಿನ ಈ ಕಾಲಘಟ್ಟಕ್ಕೆ ಸೂಕ್ತವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಚಿಂತನಾ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಪರೀಕ್ಷೆಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಂಸ್ಕೃತ ಶಿಕ್ಷಕ ಮಲ್ಲಣ್ಣ ಮಾತನಾಡಿ, ಪದಬಂಧದ ರಚನೆಯಿಂದ ಭಾಷಾ ಸಂಪತ್ತು ಹೆಚ್ಚಾಗಲಿದೆ. ಪದಬಂಧ ರಚನೆಯಲ್ಲಿ ಒಂದು ಪದಕ್ಕೆ ಹಲವು ಅರ್ಥಗಳನ್ನು ಒಳಗೊಂಡಿರುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಚಿಂತನಾ ಸಾಮರ್ಥ್ಯ ಹೆಚ್ಚಾಗುವುದರ ಮೂಲಕ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವಲ್ಲಿ ವಿಜಯವಾಣಿ ಪತ್ರಿಕೆ ಸ್ಪರ್ಧೆ ಆಯೋಜಿಸಿರುವುದು ಮೆಚ್ಚುವ ಸಂಗತಿ ಎಂದರು.
ಭರಪೂರ ಮೆಚ್ಚುಗೆ ವ್ಯಕ್ತ: ಸಾಮಾಜಿಕ ಕಳಕಳಿಯನ್ನು ಹೊಂದಿರುವ ವಿಜಯವಾಣಿ ದಿನಪತ್ರಿಕೆ ನೈಜ ವರದಿಯನ್ನು ಪ್ರಕಟಿಸುತ್ತಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಪರಿಸರದ ಸಂರಕ್ಷಣೆಗಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಶಾಲಾ, ಕಾಲೇಜಿನಲ್ಲಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆ ಆಯೋಜಿಸುತ್ತಿದೆ. ಇದೀಗ ಪದಬಂಧ ಸ್ಪರ್ಧೆಯನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂದು ಗಣ್ಯರು ಹಾಗೂ ವಿದ್ಯಾರ್ಥಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು.