ಚಿಂತಕರ ವಿಚಾರಧಾರೆ ಹರಿಯುವ ನೀರಾಗಲಿ

Let the thoughts of thinkers be flowing water
ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ನಡೆದ ದತ್ತಿ ಕಾರ್ಯಕ್ರಮವನ್ನು ಡಾ.ಸುರೇಶ ಬಿರಾದಾರ ಉದ್ಘಾಟಿಸಿದರು. ಡಾ.ಚಂದ್ರಶೇಖರ ಹೊಸಮನಿ, ಬಸವರಾಜ ಹಂಚಲಿ, ಡಾ.ಭುವನೇಶ್ವರಿ ಮೇಲಿನಮಠ ಮತ್ತಿತರರಿದ್ದಾರೆ.
Published on

ವಿಜಯಪುರ: ಸಮಾಜದಲ್ಲಿ ಚಿಂತಕರ ವಿಚಾರಧಾರೆಗಳು ನಿಂತ ನೀರಾಗದೆ ನಿರಂತರವಾಗಿ ಹರಿಯಬೇಕು. ಚಿಂತನ-ಮಂಥನದ ಮೂಲಕ ಹೊರಬಂದ ಸದ್ವಿಚಾರಗಳು ಸಮಾಜವನ್ನು ಸರಿದಾರಿಗೆ ತರುವಂತಾಗಬೇಕೆಂದು ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಚೇರ್ಮನ್ ಹಾಗೂ ಬಿಜೆಪಿ ಮುಖಂಡ ಡಾ.ಸುರೇಶ ಬಿರಾದಾರ ಹೇಳಿದರು.

ನಗರದ ಕಸಾಪ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಲಿಂಗೈಕ್ಯ ಚನ್ನವೀರ ಸ್ವಾಮೀಜಿ ಸಾರಂಗಮಠ ಮತ್ತು ಸಿಂಪಿ ಲಿಂಗಣ್ಣ ಸ್ಮರಣಾರ್ಥ ಭಾನುವಾರ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಾಹಿತ್ಯ ಪ್ರಕಾರಗಳೇನೇ ಇರಲಿ ಅವೆಲ್ಲವೂ ಸಮಾಜದ ಓರೆಕೋರೆಗಳನ್ನು ತಿದ್ದುವ ಸಾಧನಗಳೇ ಆಗಿವೆ. ಮೊದಲೆಲ್ಲ ಸಾಹಿತ್ಯ ಮತ್ತು ಚಳವಳಿ ವಿಶ್ವವಿದ್ಯಾಲಯಗಳಿಂದಲೇ ರೂಪುಗೊಳ್ಳುತ್ತಿದ್ದವು. ನನ್ನ ವಿದ್ಯಾರ್ಥಿ ಜೀವನದಲ್ಲಿ ಬಂಡಾಯ ಸಾಹಿತ್ಯ ಹೆಚ್ಚು ಪ್ರಚಲಿತದಲ್ಲಿತ್ತು. ಇದೀಗ ಅನೇಕ ಪ್ರಕಾರಗಳಿದ್ದು, ಯಾವುದೇ ಸಾಹಿತ್ಯವಾದರೂ ಅದು ಸಮಾಜ ಮತ್ತು ವ್ಯಕ್ತಿಯನ್ನು ಬಿಟ್ಟಿರಲಾರದು. ಸಮಾಜ ಮತ್ತು ವ್ಯಕ್ತಿಯನ್ನು ಸರಿದಾರಿಗೆ ತರುವಲ್ಲಿ ಸಾಹಿತ್ಯ ಮತ್ತು ಸಾಹಿತಿಗಳ ಪಾತ್ರ ಅನನ್ಯ ಎಂದರು.

ಗೌರವ ಸನ್ಮಾನ ಸ್ವೀಕರಿಸಿದ ನೂತನ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ ಹೊಸಮನಿ ಮಾತನಾಡಿ, ದಣಿವರಿಯದ ಕ್ಷೇತ್ರವೆಂದರೆ ಅದು ಸಾಹಿತ್ಯ ಕ್ಷೇತ್ರ, ಸಾಹಿತ್ಯದಿಂದ ಶಿಕ್ಷಣ ಕ್ಷೇತ್ರ ಶ್ರೀಮಂತವಾಗಿದೆ. ಹೀಗಾಗಿ ಸಾಹಿತ್ಯ ಚಟುವಟಿಕೆಗೆ ನಮ್ಮ ಇಲಾಖೆ ನಿರಂತರ ಸಹಕಾರ ನೀಡಲಿದೆ ಎಂದರು.

ಬಸವರಾಜ ಹಂಚಲಿ ಉಪನ್ಯಾಸ ನೀಡಿ, ಶರಣರ ನಡೆನುಡಿ ಒಂದೇ ಆಗಿತ್ತು, ಅವರ ಬದುಕೇ ವಚನಗಳಾಗಿ ಸಾಹಿತ್ಯ ರೂಪದಲ್ಲಿ ಇಂದು ಜಗತ್ತಿಗೆ ಬೆಳಕಾಗಿದೆ. ಆತ್ಮದ ಅನುಭೂತಿ ಹೆಚ್ಚಿಸವಲ್ಲಿ ಶರಣರ ಸಂಘದಲ್ಲಿ ಇರಬೇಕು ಎಂದರು.

ವಿನೋದ ಹಿರೇಮಠ ಅವರು ಸಿಂಪಿ ಲಿಂಗಣ್ಣನವರ ಜೀವನ ಸಾಧನೆ ಮತ್ತು ಅವರ ವಿಚಾರಗಳ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಭುವನೇಶ್ವರಿ ಮೇಲಿನಮಠ ಮಾತನಾಡಿ, ನಮ್ಮ ನಾಡಿನಲ್ಲಿ ಎಂಬಿಬಿಎಸ್ ಮತ್ತು ಇಂಜಿನಿಯರಿಂಗ್ ಪದವಿಗಳು ಕನ್ನಡದಲ್ಲಿ ಆಗಬೇಕು. ಈಗಾಗಲೇ ನಾನು ಕನ್ನಡದ ಸುಮಾರು ನಲವತ್ತು ಸಾವಿರ ಶಬ್ದಗಳನ್ನು ತಂತ್ರಾಂಶಕ್ಕೆ ಅವಳವಡಿಸಿದ್ದೇನೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರ ಗಂಭೀರವಾಗಿ ಚಿಂತನೆ ಮಾಡುವುದು ಅವಶ್ಯವಾಗಿದೆ ಎಂದರು.

ಪರಶುರಾಮ ಭಾಸಗಿ, ರಾಜುಗೌಡ ಕಳಸಗೊಂಡ, ಪ್ರೊ. ಲಕ್ಷ್ಮಿನರಸಯ್ಯ ಎನ್.ಸೀಮಾ ಸದಲಗಾ ಮಾತನಾಡಿದರು. ಭವಾನಿ ಅಂಗಡಿ ಮತ್ತು ಆನಂದ ಹೊನವಾಡ ವಚನಗಾಯನ ಪ್ರಸ್ತುತ ಪಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಡಾ.ಆನಂದ ಕುಲಕರ್ಣಿ, ಡಾ. ಸಂಗಮೇಶ ಮೇತ್ರಿ, ವಿದ್ಯಾವತಿ ಅಂಕಲಗಿ, ರಾಜಾಸಾಹೇಬ ಶಿವನಗುತ್ತಿ, ಅಭಿಷೇಕ್ ಚಕ್ರವರ್ತಿ, ಅರ್ಜುನ ಶಿರೂರ, ವಿಜಯಕುಮಾರ ಘಾಟಗೆ, ಅಬ್ದುಲ್‌ರಜಾಕ ಮುಲ್ಲಾ, ಸಿದ್ರಾಮಯ್ಯ ಲಕ್ಕುಂಡಿಮಠ, ಶರಣಗೌಡ ಪಾಟೀಲ, ಅಕ್ಕಮಹಾದೇವಿ ಬುರ್ಲಿ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಸವಿತಾ ಕಲ್ಯಾಣಪ್ಪಗೋಳ, ಎಂ.ಎ. ಭಕ್ಷಿ, ಜ್ಯೋತಿ ಹಿಪ್ಪರಗಿ, ಡಾ.ಅಕ್ಷಯ ಕುಲಕರ್ಣಿ, ತ್ರಿವೇಣಿ ವಾರದ, ಆರ್.ಬಿ. ಜಾಧವ, ವಿದ್ಯಾವತಿ ಕಿರಣಿ, ಬಿ.ಕೆ. ಸಾಳುಂಕೆ, ಸಾವಿತ್ರಿ ಮನೋಜಿ, ಸಿದ್ರಾಮ ಬಿರಾದಾರ, ಅಹಮದ್ ವಾಲೀಕಾರ, ಕೃಷ್ಣಾಜಿ ಕುಲಕರ್ಣಿ, ಸುರೇಶ ಜತ್ತಿ ಮತ್ತಿತರರಿದ್ದರು.
ಬಸವರಾಜ ರೆಬಿನಾಳ ನಿರೂಪಿಸಿದರು. ಸನ್ನಿಧಿ ಹೊನ್ನುಟಗಿ ಸಂಗೀತ ಸೇವೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net