

ಮೈಸೂರು: ಜನಪರ ವಿಚಾರಗಳ ಬಗ್ಗೆ ಸದಾ ಒಲವು ಹೊಂದಿದ್ದ ಪಟ್ಟಾಭಿರಾಮ ಸೋಮಯಾಜಿ ಅವರು, ಸಮಾಜದ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದ ಶಿಕ್ಷಕರಾಗಿದ್ದರು ಎಂದು ಚಿಂತಕ ಕಾಳೇಗೌಡ ನಾಗವಾರ ಬಣ್ಣಿಸಿದರು.
ಕುವೆಂಪುನಗರದ ಸುರುಚಿ ರಂಗಮಂದಿರದಲ್ಲಿ ಅಪರಾಜಿತ ಪ್ರಕಾಶನದಿಂದ ಸೋಮವಾರ ಆಯೋಜಿಸಿದ್ದ ಚಿಂತಕ ಪಟ್ಟಾಭಿರಾಮ ಸೋಮಯಾಜಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹಳಷ್ಟು ಕಾರ್ಯ ಮಾಡಬಹುದಾಗಿದ್ದ ತುರ್ತಿನ ಕಾಲ ಇದಾಗಿತ್ತು. ಪಟ್ಟಾಭಿಯಂಥ ಸ್ಪಷ್ಟ ನಿಲುವಿನ ವ್ಯಕ್ತಿ ಸಮಾಜಕ್ಕೆ ಅಗತ್ಯವಾಗಿದ್ದರು. ಅವರ ಅಗಲಿಕೆ ದೊಡ್ಡ ನಷ್ಟ. ಜನಪರ ಹೋರಾಟಗಳಲ್ಲಿ ತೊಡಗಿಕೊಳ್ಳುವ ಎಲ್ಲರೂ ಈಗ ಆರೋಗ್ಯದತ್ತಲೂ ಗಮನ ಹರಿಸಬೇಕು ಎಂದರು.
ಸಾಹಿತಿ ಪ್ರೊ.ಒ.ಎಲ್.ನಾಗಭೂಷಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದ ಪಟ್ಟಾಭಿರಾಮ ಸೋಮಯಾಜಿ ಅವರು ಸೈದ್ಧಾಂತಿಕ ಸ್ಪಷ್ಟತೆಯನ್ನೂ ಹೊಂದಿದ್ದರು. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವವರು ಒಂಟಿಯಾಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾ, ಪಟ್ಟಾಭಿಯವರ ಕವಿತೆಯೊಂದನ್ನು ವಾಚಿಸಿ ನಮನ ಸಲ್ಲಿಸಿದರು.
ರಂಗಾಯಣದ ಮಾಜಿ ನಿರ್ದೇಶಕ ಎಚ್. ಜನಾರ್ದನ (ಜನ್ನಿ) ಮಾತನಾಡಿ, ಪಟ್ಟಾಭಿಯವರು ಜನರ ಕಷ್ಟಗಳಿಗೆ, ದುಃಖಗಳಿಗೆ ಸ್ಪಂದಿಸುತ್ತಿದ್ದರು. ಅವರ ಮಾತು, ಕೃತಿಗಳು ಇದನ್ನೇ ಹೇಳುತ್ತಿದ್ದವು. ಅವರೊಬ್ಬ ಜೀವಪರ ವ್ಯಕ್ತಿ ಎಂದು ಸ್ಮರಿಸಿದರು.
ಲೇಖಕಿ ಪ್ರೊ.ಚ.ಸರ್ವಮಂಗಳ, ಚಿಂತಕಿ ಮೀನಾ ಮೈಸೂರು ಅವರು, ಪಟ್ಟಾಭಿ ಅವರೊಂದಿಗಿನ ಒಡನಾಟವನ್ನು ನೆನೆದು ಭಾವುಕರಾದರು. ತಮ್ಮ ಅನುಭವಗಳನ್ನು ಹಂಚಿಕೊಂಡರು.
ಪತ್ರಕರ್ತ ಜಿ.ಪಿ.ಬಸವರಾಜು, ರಂಗಕರ್ಮಿ ರಾಮೇಶ್ವರಿ ವರ್ಮಾ, ಲೇಖಕಿ ಪದ್ಮಾ ಶ್ರೀರಾಮ, ರಂಗಕರ್ಮಿ ಮೀರಾ ಮೂರ್ತಿ, ಲೇಖಕ ವಿಕ್ರಂ ರಾಜೇ ಅರಸ್, ನಿರಂತರ ಸಂಸ್ಥೆಯ ಶ್ರೀನಿವಾಸ್ ಪಾಲಹಳ್ಳಿ ಇತತರು ಇದ್ದರು.