

ಚಿಂಚೋಳಿ: ರಾಜ್ಯ ಸರ್ಕಾರವು ತಾರತಮ್ಯ ನೀತಿ ಕೈಬಿಡಬೇಕು. ಗಡಿ ತಾಲೂಕಿನ ಅಭಿವೃದ್ಧಿಗೆ ಪೂರಕವಾದ ವ್ಯವಸ್ಥೆಗೆ ಮುಂದಾಗಬೇಕು ಎಂದು ಜಿ.ಪಂ ಸದಸ್ಯ ಗೌತಮ್ ಪಾಟೀಲ್ ಆಗ್ರಹಿಸಿದರು.
ಪಟ್ಟಣದಲ್ಲಿರುವ ಮಾಜಿ ಸಚಿವ ದಿ. ವೈಜನಾಥ ಪಾಟೀಲ ಸ್ಮಾರಕದ ಬಳಿ ಬುಧವಾರದಂದು ಹಮ್ಮಿಕೊಂಡ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ದಿ.ವೈಜನಾಥ ಪಾಟೀಲ್ ಅವರು 371ನೇ ವಿಧಿ ಜಾರಿಗಾಗಿ ಹೋರಾಟ ರೂಪಿಸಿದ್ದರು. ಆದರೂ ತಾರತಮ್ಯ ಮುಂದುವರಿದಿದೆ. ತಾಲೂಕಿನ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲೆಯಲ್ಲಿ 542, ಪ್ರೌಢಶಾಲೆಯಲ್ಲಿ 92 ಶಿಕ್ಷಕರ ಹುದ್ದೆ ಖಾಲಿಯಿವೆ. ಮಕ್ಕಳ ಭವಿಷ್ಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ತಾಲೂಕಿನ ಪಂಚಾಯತ್ ರಾಜ್ ಇಲಾಖೆಯಲ್ಲಿ 11 ಎಇಇ, ಜೆಇ, ಹುದ್ದೆ, ಕುಡಿಯುವ ನೀರು ಸರಬರಾಜು ಇಲಾಖೆಯಲ್ಲಿ 07 ಹುದ್ದೆ, ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೊಳಿಸಲು ಸರ್ಕಾರ ಹಿಂದೇಟು ಹಾಕುತ್ತಿದ್ದು, ತಾಲೂಕಿನ ಅಭಿವೃದ್ಧಿ ಕುಂಠಿತವಾಗುತ್ತಿದೆ. ಕೂಡಲೇ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಈ ಸುದ್ದಿಗೊಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಭೀಮಶೇಟ್ಟಿ ಮುರುಡಾ, ಕೆ.ಎಂ.ಬಾರಿ, ಹಿರಿಯ ನ್ಯಾಯವಾದಿ ಶ್ರೀಮಂತ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.