

ಚಿಂಚೋಳಿ: ತಾಲೂಕು ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್) ಬ್ಯಾಂಕ್ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತೆ ಚಂದ್ರಕಲಾ ತಟ್ಟೆಪಲ್ಲಿ ಹಾಗೂ ಉಪಾಧ್ಯಕ್ಷರಾಗಿ ಅಮರಜೀವನ ಯಾಕಾಪುರ (ಪಕ್ಷೇತರ) ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಚಂದ್ರಕಲಾ ೯ ಮತ ಪಡೆದು ಗೆಲುವಿನ ನಗೆ ಬೀರಿದರೆ, ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಹಣಮಂತರಾವ ಪೊಲೀಸ್ ಪಾಟೀಲ್ ೬ ಮತಗಳೊಂದಿಗೆ ಸೋಲೊಪ್ಪಿಕೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ (ಸ್ವತಂತ್ರ) ಅಮರಜೀವನ ಯಕಾಪುರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಸೇಡಂ ಸಹಕಾರಿ ಸಂಘಗಳ ಸಹಾಯಕ ನಿರ್ದೇಶಕ ರವೀಂದ್ರ ಪ್ರಕಟಿಸಿದರು.
ಚಂದ್ರಕಲಾ ತಟ್ಟೆಪಲ್ಲಿ ಅಧ್ಯಕ್ಷೆಯಾಗಿ ಆಯ್ಕೆ ಆಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮುಖಂಡ ಸುಭಾಷ ರಾಠೋಡ್, ಸೇಡಂ ಬ್ಲಾಕ್ ಅಧ್ಯಕ್ಷ ಶಿವಶರಣರೆಡ್ಡಿ, ಚಿಂಚೋಳಿ ಬ್ಲಾಕ್ ಅಧ್ಯಕ್ಷ ಬಸವರಾಜ ಮಾಲಿ, ಬಾಬುರಾವ ಪಾಟೀಲ್, ಬಸಯ್ಯ ಗುತ್ತೇದಾರ್, ಲಕ್ಷö್ಮಣ ಆವಂಟಿ, ಬಸವರಾಜ ಸಜ್ಜನಶೆಟ್ಟಿ, ಮಸ್ತಾನ್ ಪಟೇಲ್, ನಾಗೇಶ್ವರ ಮಾಲಿಪಾಟೀಲ್, ಮಧುಸೂದನರೆಡ್ಡಿ ಕಲ್ಲೂರ ಇತರರಿದ್ದರು.
ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಮುಖಂಡ ಸುಭಾಷ ರಾಠೋಡ್ ಹಾಗೂ ಪಿಕಾರ್ಡ್ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರ ಸಹಕಾರದಿಂದ ಅಧ್ಯಕ್ಷೆಯಾಗಿ ಚುನಾಯಿಸಿದ್ದು, ಕ್ಷೇತ್ರದ ರೈತರ ಅಭಿವೃದ್ಧಿ ಮತ್ತು ಬ್ಯಾಂಕಿನ ನಿಯಮಗಳನ್ನು ಕಾನೂನಾತ್ಮಕವಾಗಿ ಅನುಷ್ಠಾನಗೊಳಿಸಲು ಶ್ರಮಿಸುವೆ.
| ಚಂದ್ರಕಲಾ ತಟ್ಟೆಪಲ್ಲಿ ಪಿಕಾರ್ಡ್ ಬ್ಯಾಂಕ್ ನೂತನ ಅಧ್ಯಕ್ಷೆ
ಪಕ್ಷೇತರರ ಸಂಭ್ರಮ
ಅಮರಜೀವನ ಯಾಕಾಪುರ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ತಿಂದು ಸಂಭ್ರಮಿಸಿದರು. ಸಹಕಾರಿ ಧುರೀಣ ರಮೇಶ ಯಾಕಾಪುರ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಹಿಂದೆಯೂ ಎಪಿಎಂಸಿ, ಟಿಎಪಿಸಿಎಂಎಸ್ ಚುನಾವಣೆಗಳಲ್ಲಿ ಸ್ವತಂತ್ರವಾಗಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದೀಗ ಪಿಕಾರ್ಡ್ ಬ್ಯಾಂಕ್ ಚುನಾವಣೆಯನ್ನೂ ಸ್ವತಂತ್ರವಾಗಿ ಎದುರಿಸಿದ್ದೇವೆ. ಬಿಜೆಪಿ-ಕಾಂಗ್ರೆಸ್‌ನಿಂದ ಕರೆ ಬಂದಿದ್ದರೂ ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳಲಿಲ್ಲ. ಸ್ವತಂತ್ರವಾಗಿ ನಮ್ಮ ಬೆಂಬಲಿಗರು ಯಾವುದೇ ಷರತ್ತು, ಬೇಡಿಕೆಗಳಿಲ್ಲದೆ ಕಾಂಗ್ರೆಸ್‌ಗೆ ಬಾಹ್ಯ ಬೆಂಬಲ ನೀಡಿದ್ದಾರೆ. ಉಪಾಧ್ಯಕ್ಷರಾಗಿ ಅಮರಜೀವನ ಅವಿರೋಧ ಆಯ್ಕೆಗೊಂಡಿದ್ದು, ರೈತರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ ಎಂದು ಹೇಳಿದರು. ಪುರಸಭೆ ಸದಸ್ಯ ನಾಗೇಂದ್ರಪ್ಪ ಗುರಂಪಳ್ಳಿ, ಬಸವರಾಜ ಶಿರಸಿ, ವಿಜಯಕುಮಾರ ಶಾಬಾದಿ, ಚಂದ್ರಕಾಂತ ಇತರರಿದ್ದರು.
ನ್ಯಾಯಾಲಯ ಕದ ತಟ್ಟುವತ್ತ ಕೇಸರಿಪಡೆ ಹೆಜ್ಜೆ
ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ವಾಮಮಾರ್ಗ ಅನುಸರಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಸಂತೋಷ ಗಡಂತಿ ತಿಳಿಸಿದ್ದಾರೆ. ಪಿಕಾರ್ಡ್ ಬ್ಯಾಂಕ್ ಬೈಲಾ ನಿಯಮ ಗಾಳಿ ತೂರಿ ಮತದಾನ ನಡೆಸಿ ಗೆಲುವು ಸಾಧಿಸಿದ್ದು, ಕೂಡಲೇ ನಾಲ್ಕು ಸದಸ್ಯರ ಸದಸ್ಯತ್ವ ಅನರ್ಹಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುವುದಾಗಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಬ್ಯಾಂಕ್ ಸದಸ್ಯರಾದ ಸುಭಾಷ್ಚಂದ್ರ, ದಶರಥ ಚವ್ಹಾಣ್, ನಾಗರೆಡ್ಡಿ ಪಾಟೀಲ್, ಸುಜಾತರೆಡ್ಡಿ ಮಾನಸಿಕ, ದೈಹಿಕವಾಗಿ ಸದೃಢರಾಗಿದ್ದರು. ಆದರೆ ಅವರಿಗೆ ಕಾಂಗ್ರೆಸ್ ಮುಖಂಡರು ಬೆದರಿಸಿ ಅವರ ಮತ ತಾವು ಚಲಾಯಿಸಿ ಚುನಾವಣಾ ನೀತಿ ಗಾಳಿಗೆ ತೂರಿದ್ದಾರೆ. ಹೀಗಾಗಿ ನ್ಯಾಯಾಲಯ ಮೊರೆ ಹೋಗುತ್ತೇವೆ. ಅವರ ಸದಸ್ಯತ್ವ ರದ್ದುಗೊಳಿಸಿ ಪುನಃ ಚುನಾವಣೆ ನಡೆಸುವಂತೆ ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದರು. ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಜಗದೀಶಸಿಂಗ್ ಠಾಕೂರ್, ಹಣಮಂತರಾವ ಪೊಲೀಸ್ ಪಾಟೀಲ್, ವಿಜಯಕುಮಾರ ಚೆಂಗಟಾ, ಭೀಮಶೆಟ್ಟಿ ಮುರುಡಾ, ಗಿರಿರಾಜ ನಾಟೀಕಾರ, ಶರಣಗೌಡ ಮುದ್ದಾ ಇತರರಿದ್ದರು.