

ಚಿಂಚೋಳಿ: ತಾಂಡಾವೊಂದರಲ್ಲಿ 8 ವರ್ಷದ ಬಾಲಕಿ ಹಾಗೂ 5 ವರ್ಷದ ಬಾಲಕನ ಮೇಲೆ ಲೈಗಿಂಕ ದೌರ್ಜನ್ಯ ಎಸಗಿದ ಘಟನೆ ಸೋಮುವಾರ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಚಿನ್ ಚವ್ಹಾಣ್ (21) ಬಂಧಿತ. ಚಾಕ್‌ಲೇಟ್ ಕೊಡುವ ನೆಪದಲ್ಲಿ ಮಕ್ಕಳನ್ನು ನಿರ್ಜನ ಪ್ರದೇಶದಲ್ಲಿ ಕೊಂಡೊಯ್ದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಮಕ್ಕಳ ಹೇಳಿಕೆಯನ್ನು ಆಧರಿಸಿ ಕುಂಚಾವರಂ ಠಾಣೆಯಲ್ಲಿ ಪೋಕ್ಸೋ ಅಡಿ ಕೇಸ್ ದಾಖಲಾಗಿದೆ. ಬಾಲಕ, ಬಾಲಕಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ತಾಯಿಯ ಬಳಿಯಿದ್ದ ಬಾಲಕನಿಗೆ ಚಾಕ್‌ಲೇಟ್ ಕೊಡಿಸುತ್ತೇನೆ ಬಾ ಎಂದು ಸಚಿನ್ ಕರೆದಿದ್ದು, ಮಗು ಹೋಗಿಲ್ಲ. ಬಳಿಕ ತಾಯಿ ಹೋಗಲು ತಿಳಿಸಿದ್ದಾಳೆ. ಆಗ ಮಗು ಈ ಹಿಂದೆ ನಡೆದ ಘಟನೆಯನ್ನು ಹೇಳಿದೆ. ಅಲ್ಲದೆ ಬಾಲಕಿಯೂ ತನಗಾದ ದೌರ್ಜನ್ಯದ ಬಗ್ಗೆ ವಿವರಿಸಿದ್ದಾಳೆ. ಬಳಿಕ ಮಕ್ಕಳ ಹೇಳಿಕೆಯಂತೆ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಎಸ್‌ಪಿ ಇಶಾ ಪಂತ್, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್‌ಪಿ ಕೆ.ಬಸವರಾಜ, ಸಿಪಿಐ ಅಂಬಾರಾಯ ಕಮಾನಮನಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುರುಪ್ರಸಾದ ಕವಿತಾಳ, ಟಿಎಚ್‌ಒ ಡಾ.ಮಹ್ಮದ್ ಗಫಾರ್, ಪಿಎಸ್‌ಐ ವೆಂಕಟೇಶ ನಾಯಕ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.