

ಚಿಂಚೋಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಲ್ಲಿ ರೈತರ ವಿರೋಧಿ ನೀತಿ ಅನುಸರಿಸುತ್ತಿದೆ. ರೈತಪರ ಯೋಜನೆಗಳನ್ನು ರದ್ದುಗೊಳಿಸಿ ವಂಚಿಸಿರುವುದಲ್ಲದೇ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ್ ಕಾಳಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕನಕ ವೃತ್ತದಿಂದ ತಹಸೀಲ್ ಕಚೇರಿ ವರೆಗೆ ಬೃಹತ್ ಮೆರವಣಿಗೆ ನಡೆಸಿ ಪ್ರತಿಭಟಿಸಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರಕಾರವು ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ, ರೈತ ವಿದ್ಯಾನಿಧಿ, ಭೂ ಸಿರಿ, ಶ್ರಮ ಶಕ್ತಿ, ರೈತ ಸಂಪದ, ಎಪಿಎಂಸಿ ಕಾನೂನು, ಕೃಷಿ ಭೂಮಿ, ಗೋಶಾಲೆ, ಕ್ಷೀರ ಸಮೃದ್ಧಿ ಸೇರಿದಂತೆ ಅನೇಕ ಯೋಜನೆಗಳನ್ನು ರದ್ದುಗೊಳಿಸಿ ರೈತರ ಬದುಕಿಗೆ ಬೇರೆ ಎಳೆದಿದ್ದಾರೆ ಎಂದು ಸರಕಾರದ ವಿರುದ್ಧ ಹರಿಹಾಯ್ದರು.
ಕೂಡಲೇ ರೈತಪರ ಯೋಜನೆಗಳನ್ನು ಯಥಾಸ್ಥಿತಿ ಮುಂದುವರೆಸಬೇಕು. ಕ್ಷೇತ್ರವು ಬರಗಾಲ ಪೀಡಿತ ಪೆಟ್ಟಿಗೆ ಸೇರ್ಪಡೆಗೊಳಿಸಬೇಕು. ರೈತರ ಪಂಪಸೇಟಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಪ್ರಮುಖರಾದ ಚಿತ್ರಶೇಖರ ಪಾಟೀಲ್, ಗೌತಮ್ ಪಾಟೀಲ್, ಗಿರಿರಾಜ ನಾಟೀಕಾರ, ರಾಜಕುಮಾರ ತಳವಾರ, ವೀರಭದ್ರಪ್ಪ ತೆಂಗಿಳಿ, ಜೈಪ್ರಕಾಶ ತಳವಾರ, ಭೀಮಶೇಟ್ಟಿ ಮುರುಡಾ, ಕೆ.ಎಂ.ಬಾರಿ, ರಾಜಕುಮಾರ ಪವಾರ್, ಪ್ರೇಮಸಿಂಗ ಜಾಧವ್, ಸುರೇಶ್ ಸಂದಾಪೂರ ಸೇರಿದಂತೆ ಅನೇಕರು ಇದ್ದರು.