

ಚಿಂಚೋಳಿ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಅನುದಾನದ ಕೊರತೆ ಆಗದಿರಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯನ್ನು ಅಸ್ತಿತ್ವಕ್ಕೆ ತಂದಿದೆ. ಆದರೆ ಮಂಡಳಿ ಅನುದಾನ ಅಭಿವೃದ್ಧಿಗೆ ಬಳಕೆಯಾಗದೆ ಪೋಲಾಗುತ್ತಿದೆ. ಇದಕ್ಕೆ ಭೂತಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಶೌಚಗೃಹ ಕಾಮಗಾರಿಯೇ ತಾಜಾ ಉದಾಹರಣೆ.
ಭೂತಪುರ ಶಾಲೆ ಮಕ್ಕಳಿಗಾಗಿ ಕೆಕೆಆರ್‌ಡಿಬಿ ಅಡಿ 2020-21ರಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಎರಡು ವರ್ಷ ಕಳೆದರೂ ಮುಗಿದಿಲ್ಲ. ಇನ್ನು ಈವರೆಗೆ ನಡೆದಿರುವ ಕಾಮಗಾರಿಯೂ ಕಳಪೆಯಾಗಿದೆ.
ಶೌಚಗೃಹ ಕೋಣೆಗಳ ಬಾಗಿಲು ಮುರಿದು ಬಿದ್ದಿವೆ, ಸೂಕ್ತ ನೀರಿನ ವ್ಯವಸ್ಥೆ ಮಾಡಿಲ್ಲ. ಕಿಟಕಿಗಳನ್ನು ಸರಿಯಾಗಿ ಅಳವಡಿಸಿಲ್ಲ. ಇತರ ಕೆಲಸಗಳು ಬಾಕಿ ಉಳಿದಿವೆ. ಗುತ್ತಿಗೆದಾರರಂತೂ ಕಾಮಗಾರಿ ಕಡೆ ಕಣ್ಣು ಹಾಯಿಸುತ್ತಿಲ್ಲ. ಇಲ್ಲಿವರೆಗೂ ಶಾಲೆಗೆ ಹಸ್ತಾಂತರಿಸುವ ಕೆಲಸವೂ ಆಗಿಲ್ಲ. ಇದರಿಂದಾಗಿ ಮಕ್ಕಳು ಶೌಚಕ್ಕೆ ಬಯಲು ಪ್ರದೇಶವನ್ನೇ ಅವಲಂಬಿಸುವಂತಾಗಿದೆ.
ಮಂಡಳಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಗುಣಮಟ್ಟದೊಂದಿಗೆ ಶೌಚಗೃಹ ನಿರ್ಮಿಸಿ ಶಾಲೆಗೆ ಹಸ್ತಾಂತರಿಸಬೇಕು ಎಂಬುದು ಸ್ಥಳೀಯರು ಹಾಗೂ ಶಿಕ್ಷಣ ಪ್ರೇಮಿಗಳ ಒತ್ತಾಸೆಯಾಗಿದೆ.
ಭೂತಪುರದಲ್ಲಿ ಶೌಚಗೃಹ ಕಾಮಗಾರಿ ಅಪೂರ್ಣಗೊಂಡಿರುವುದು ಗಮನಕ್ಕೆ ಬಂದಿದೆ. ಇಲ್ಲಿವರೆಗೂ ಗುತ್ತಿಗೆದಾರರು ಶೌಚಗೃಹವನ್ನು ಶಾಲೆಗೆ ಹಸ್ತಾಂತರಿಸಿಲ್ಲ. ಕೂಡಲೇ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಕ್ರಮಕ್ಕೆ ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
| ಹಣಮಂತ ರಾಠೋಡ್, ಕ್ಷೇತ್ರ ಶಿಕ್ಷಣಾಧಿಕಾರಿ, ಚಿಂಚೋಳಿ