ಚಿ.ನಾ.ಹಳ್ಳಿ ಕ್ಷೇತ್ರದ ಮಕ್ಕಳ ಭವಿಷ್ಯಕ್ಕಾಗಿ ಉಚಿತ ತರಬೇತಿ

13
Published on

ಚಿಕ್ಕನಾಯಕನಹಳ್ಳಿ: ಕ್ಷೇತ್ರದ ಗ್ರಾಮೀಣ ಮಕ್ಕಳ ಭವಿಷ್ಯಕ್ಕಾಗಿ ನನ್ನದೊಂದು ಚಿಕ್ಕ ಹೆಜ್ಜೆಯನ್ನು ಅವರೊಂದಿಗೆ ಇಟ್ಟಿದ್ದು, ಅವರ ಜೀವನ ಉತ್ತಮವಾಗಿರಲಿ, ಸಾಧನೆಗೆ ಪೂರಕವಾದ ಸೌಲಭ್ಯಗಳನ್ನು ನಾನು ಕಲ್ಪಿಸುತ್ತೇನೆ ಇವುಗಳನ್ನು ಬಳಸಿಕೊಂಡು ಪಾಲಕರಿಗೆ ಹೊರೆಯಾಗದಂತೆ ಶಿಕ್ಷಣದಲ್ಲಿ ಸಾಧನೆ ಮಾಡಬೇಕು ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.

ಪಟ್ಟಣದ ತೀನಂಶ್ರೀಭವನದಲ್ಲಿ ಎಸ್​.ಬಿ.ಚಾರಿಟಬಲ್​ ಟ್ರಸ್ಟ್​ವತಿಯಿಂದ ಜ್ಞಾನ ಕಲ್ಪ ರ್ಶಿಷಿಕೆಯಡಿಯಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಸಿಇಟಿ, ನೀಟ್​, ಜೆಇಇ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಪರಿಕರಗಳನ್ನು ವಿತರಿಸಿ ಮಾತನಾಡಿ, 10 ವರ್ಷಗಳಿಂದ ದ್ವೀತಿಯ ಪಿಯುಸಿ ಪರೀಕ್ಷೆ ನಂತರ ಸಿಇಟಿಯವರೆಗೆ ನಮ್ಮ ಟ್ರಸ್​ನಿಂದ ತರಬೇತಿ ನೀಡಲಾಗುತ್ತಿದ್ದು, ಈ ವರ್ಷವು ತರಬೇತಿ ನೀಡಲಾಗುತ್ತಿದೆ. ಈ ಬಾರಿ ಪ್ರಥಮ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಪೂರ್ತಿ ತರಬೇತಿ ನೀಡಲು ಉದ್ದೇಶಿಸಿದ್ದು, ಪ್ರತಿ ಭಾನುವಾರ ಸಿಇಟಿ, ನೀಟ್​, ಜೆಇಇಗೆ ಸಂಬಂಧಿಸಿದಂತೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಆತ್ಯಾಧುನಿಕ ತಂತ್ರಜ್ಞಾನ ಬಳಸಿ ತರಬೇತಿ ನೀಡಲಾಗುವುದು. ಇದು ಉಚಿತವಾಗಿದ್ದು, ಈ ತರಬೇತಿಗೆ ಪ್ರಥಮ 75, ದ್ವೀತಿಯ ಪಿಯುಸಿಯ 75 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಸಿಇಟಿ ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳ ಸಂಯೋಜಕ ಕೃಷ್ಣಚೈತನ್ಯ ಮಾತನಾಡಿ, ನಮ್ಮ ಸಾಧನೆಗಳು, ಗುರಿಗಳು ನಾವು ಮಾಡುವ ಕೆಲಸಗಳೆಲ್ಲವೂ ನಮ್ಮ ಸ್ವಸುಖಕ್ಕಾಗಿ ಅಂದುಕೊಳ್ಳದೇ, ತಂದೆ&ತಾಯಿಗಳಿಗಾಗಿ, ನನ್ನ ಜವಾಬ್ದಾರಿ ಎಂದು ಉತ್ತಮ ಮನಸ್ಸಿನಿಂದ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ ಪ್ರತಿಯೊಬ್ಬರು ಈ ಸಿಇಟಿ ನೀಟ್​ನಲ್ಲಿ ಯಶಸ್ವಿಯಾಗಬಹುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್​.ಕಾಂತರಾಜು ಮಾತನಾಡಿ, ನಗರ ಪ್ರದೇಶಗಳಲ್ಲಿ ಲಕ್ಷಾಂತರ ರೂ. ಖರ್ಚುಮಾಡಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗಾಗಿ ಅವರ ಶೈಕ್ಷಣಿಕ ಪ್ರಗತಿಗಾಗಿ ಈ ರೀತಿಯಲ್ಲಿ ಉಚಿತವಾಗಿ ಪರಿಕರಗಳನ್ನು ನೀಡಿ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ನಿವೃತ್ತ ಬಿಇಒ ಸಾ.ಚಿ.ನಾಗೇಶ್​ ಮಾತನಾಡಿ, ಇಂದಿನಿಂದ ಮುಂದಿನ ಪ್ರತಿ ಭಾನುವಾರ ಅಂದರೆ ಈ ವರ್ಷದ 27 ಭಾನುವಾರಗಳಲ್ಲೂ ಈ ತರಬೇತಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ ಊಟದ ವ್ಯವಸ್ಥೆ ಉಚಿತವಾಗಿ ಮಾಡಲಾಗಿದ್ದು, ನಂತರ ಸಂಜೆಯವರೆಗೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಮಕ್ಕಳಿಗೆ ಗುರುತಿನ ಚೀಟಿ ನೀಡಿದ್ದು, ಹಾಜರಾತಿ ತಂತ್ರಾಂಶದಲ್ಲಿ ಅಳವಡಿಸಲಾಗುತ್ತಿದೆ. ಶಾಸಕರು ಈ ಎಲ್ಲ ತರಬೇತಿಯ ಉಸ್ತುವಾರಿ ವಹಿಸಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿಯ ಪರಿಕರ ನೀಡಲಾಯಿತು. ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಓಂಕಾರನಾಯ್ಕ, ಉಸ್ತುವಾರಿ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಲಕ್ಷ್ಮಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net