ಚಾಲುಕ್ಯರ ಕಾಲದ ದೇವಸ್ಥಾನಗಳ ಅಭಿವೃದ್ಧಿ

h29-Shettar 1
Published on

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿರುವ ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.

ನಗರದ ಉಣಕಲ್​ನಲ್ಲಿರುವ ಚಂದ್ರಮೌಳೇಶ್ವರ ಹಾಗೂ ಅಮರಗೋಳದ ಬನಶಂಕರಿ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿ ಶನಿವಾರ ವೀಕ್ಷಿಸಿ ಅವರು ಮಾತನಾಡಿದರು. ದೇವಸ್ಥಾನಗಳ ಸುತ್ತ ಉದ್ಯಾನ ಹಾಗೂ ಕಾಂಪೌಂಡ್ ನಿರ್ವಿುಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಐತಿಹಾಸಿಕ ದೇವಸ್ಥಾನಗಳನ್ನು ಜೀಣೋದ್ಧಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ದೇವಸ್ಥಾನಗಳು 11ನೇ ಶತಮಾನಕ್ಕೆ ಸೇರಿವೆ. ಇವುಗಳನ್ನು ಚಾಲುಕ್ಯರ ಕಾಲದಲ್ಲಿ ನಿರ್ವಿುಸಲಾಗಿದೆ. ಈ ದೇವಸ್ಥಾನಗಳು ಮೂಲ ಸೌಕರ್ಯ ಇಲ್ಲದೆ ಹಾಳಾಗುತ್ತಿದ್ದವು. ಇವುಗಳನ್ನು ಪುರಾತತ್ವ ಇಲಾಖೆ ಅಡಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಸುತ್ತಲಿನ ಮನೆಗಳು ತೊಂದರೆಯಾಗುತ್ತಿದ್ದವು. ರಾಜ್ಯ ಸರ್ಕಾರ ಜಾಗ ಕಲ್ಪಿಸಿದರೆ ಹಾಗೂ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿದರೆ ದೇವಸ್ಥಾನದ 100 ಮೀಟರ್ ವ್ಯಾಪ್ತಿಗೆ ಬರುವ ಮನೆಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಾಲಿಕೆ, ಕಂದಾಯ ಇಲಾಖೆ ಹಾಗೂ ಪುರಾತತ್ವ ಇಲಾಖೆಗಳು ಸರ್ವೆ ಕಾರ್ಯ ನಡೆಸುವಂತೆ ತಿಳಿಸಲಾಗಿದೆ. ದೇವಸ್ಥಾನಕ್ಕೆ ನಿತ್ಯ 500ಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಪ್ರವಾಸಿಗರ ಅನುಕೂಲ ದೃಷ್ಟಿಯಿಂದ ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ರಾಜಣ್ಣ ಕೊರವಿ, ಹುಬ್ಬಳ್ಳಿ ನಗರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಪುರಾತತ್ವ ಇಲಾಖೆ ಅಧಿಕಾರಿಗಳಾದ ರೇಷ್ಮಾ ಸಾವಂತ, ಬಿ. ಪ್ರಮೋದ, ಪಾಲಿಕೆ ಮಾಜಿ ಸದಸ್ಯ ಶಾಂತಪ್ಪ ದೇವಕ್ಕಿ, ಸಿದ್ದನಗೌಡ ಪಾಟೀಲ, ಅಜ್ಜಪ್ಪ ಹೊರಕೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net