ಚಾಲುಕ್ಯ ತಂಡ ಪ್ರೆಸ್ ಪ್ರೀಮಿಯರ್ ಲೀಗ್ ಚಾಂಪಿಯನ್

dj dvg criket
Published on

ದಾವಣಗೆರೆ: ಪಂದ್ಯದುದ್ದಕ್ಕೂ ಆಲ್ರೌಂಡ್ ಪ್ರದರ್ಶನ ತೋರಿದ ಚಾಲುಕ್ಯ ತಂಡ, ಪಿಪಿಎಲ್-2ಕೆ24 ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೀನಿಕ್ಸ್‌ನಂತೆ ಎದ್ದಿದ್ದ ಕದಂಬ ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.

ನಗರದ ಜಿಲ್ಲಾ ಕವಾಯತು ಮೈದಾನದಲ್ಲಿ ವರದಿಗಾರರ ಕೂಟ ಸೋಮವಾರ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಚಾಲುಕ್ಯ ತಂಡ, ಕದಂಬ ವಿರುದ್ಧ 18 ರನ್‌ಗಳ ಗೆಲುವು ಸಾಧಿಸಿ ಟ್ರೋಫಿ ಎತ್ತಿ ಹಿಡಿಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚಾಲುಕ್ಯ ತಂಡಕ್ಕೆ ಪರಶುರಾಮ್ (20), ಮಹದೇವ (11) ಆಸರೆಯಾದರು. ಪರಶುರಾಮ್ ಹ್ಯಾಟ್ರಿಕ್ ಸಿಕ್ಸ್ ಹೊಡೆಯುವ ಮೂಲಕ ದೊಡ್ಡ ಮೊತ್ತಕ್ಕೆ ಕಾರಣರಾದರು. ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದ ಚಾಲುಕ್ಯ ತಂಡದ ಬ್ಯಾಟ್ಸ್‌ಮನ್‌ಗಳು ರನ್ ಹೊಳೆ ಹರಿಸಿದರು. ನಿಗದಿತ 6 ಓವರ್‌ಗಳಲ್ಲಿ ಚಾಲುಕ್ಯ ತಂಡ 4 ವಿಕೆಟ್ ನಷ್ಟಕ್ಕೆ 59 ರನ್‌ಗಳಿಸಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಕದಂಬ ತಂಡ ಆರಂಭದಿಂದಲೇ ಕುಂಟುತ್ತಾ ಸಾಗಿತು. ಚಾಲುಕ್ಯ ತಂಡದ ರಾಮ್ ಪ್ರಸಾದ್ ಹಾಗೂ ಮಂಜಪ್ಪ ಅವರ ಸಂಘಟಿತ ದಾಳಿಯ ಪರಿಣಾಮವಾಗಿ ಕದಂಬ ತಂಡದ ಆರಂಭಿಕರನ್ನು ಬೇರ್ಪಡಿಸಿತು. ನಂತರದ ಓವರ್‌ನಲ್ಲಿ ಹನುಮಂತ ಸಿಕ್ಸ್ ಬಾರಿಸುವ ಮೂಲಕ ಗೆಲುವಿನ ಆಸೆ ಚಿಗುರಿಸಿದರು.

ಆದರೆ ಚಾಲುಕ್ಯ ತಂಡದ ಬೌಲರ್‌ಗಳು ಬಿಗುವಿನ ದಾಳಿಗೆ ತತ್ತರಿಸಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಸಿದ್ದಯ್ಯ ಹಿರೇಮಠ್ (8), ಪ್ರಮೋದ್ (6) ರನ್‌ಗಳಿಸಿದರು. ಅಂತಿಮವಾಗಿ 6 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 41 ರನ್‌ಗಳಿಸಲಷ್ಟೇ ಶಕ್ತವಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ್, ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ್, ನಿಕಟಪೂರ್ವ ಅಧ್ಯಕ್ಷ ಬಸವರಾಜ್ ದೊಡ್ಮನಿ, ಹಿರಿಯ ಪತ್ರಕರ್ತರಾದ ಬಾಮಾ ಬಸವರಾಜ್, ಸಿದ್ದಯ್ಯ ಹಿರೇಮಠ್, ಎಂ.ಬಿ.ನವೀನ್, ಸುರೇಶ್ ಕುಣಿಬೆಳಕೆರೆ, ಆರ್.ರವಿ, ಕಾಡಜ್ಜಿ ಮಂಜುನಾಥ, ಆರ್.ಎಸ್.ತಿಪ್ಪೇಸ್ವಾಮಿ, ಬದ್ರೀನಾಥ್ ಇತರರಿದ್ದರು.

ಪಂದ್ಯಶ್ರೇಷ್ಠ - ಪರಶುರಾಮ್

ಉತ್ತಮ ಬೌಲರ್ - ಡಾ.ಮಂಜಪ್ಪ

ಸರಣಿ ಶ್ರೇಷ್ಠ - ಪ್ರವೀಣ್ ಬಾಡ

ಉತ್ತಮ ಆಲ್ರೌಂಡರ್ - ಹನುಮಂತ ಕಂಚಿಕೆರೆ

ಉತ್ತಮ ಬ್ಯಾಟ್ಸ್‌ಮನ್ - ನೂರುಲ್ಲಾ

ಸಂಕ್ಷಿಪ್ತ ಸ್ಕೋರ್

ಚಾಲುಕ್ಯ 6 ಓವರ್‌ಗೆ 59/4

(ಪರಶುರಾಮ್ 20, ಮಹದೇವ 11)

ಕದಂಬ 6 ಓವರ್‌ಗೆ 41/3

(ಹನುಮಂತ 10, ಸಿದ್ದಯ್ಯ ಹಿರೇಮಠ್ 8)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net