ಚಾಲಾಕಿ ನಕಲಿ ಮಹಿಳಾ ಪೊಲೀಸ್ ಬಂಧನ

ಚಾಲಾಕಿ ನಕಲಿ ಮಹಿಳಾ ಪೊಲೀಸ್ ಬಂಧನ
Published on

ಹಾಸನ: ಸಾಂಸಾರಿಕ ಜೀವನದ ಬಿರುಕನ್ನು ದುರುಪಯೋಗಪಡಿಸಿಕೊಂಡ ಚಾಲಾಕಿ ಮಹಿಳೆಯೊಬ್ಬಳು ತನ್ನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂದು ನಂಬಿಸಿ 30 ಗ್ರಾಂ ಚಿನ್ನ ಹಾಗು 2 ಸಾವಿರ ನಗದು ತೆಗೆದುಕೊಂಡು ಪರಾರಿಯಾಗಿರುವ ಘಟನೆ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ಬಡಾವಣೆ ನಿವಾಸಿ ಕವನಾ ಎಂಬುವವರನ್ನು ಮಹಿಳೆ ಯಾಮಾರಿಸಿದ್ದಾಳೆ. ನಾಲ್ಕು ತಿಂಗಳ ಹಿಂದೆ ಕವನ ಹಾಗು ಅಗಲಹಳ್ಳಿ ಗ್ರಾಮದ ಸುನೀಲ್ ಅವರ ವಿವಾಹವಾಗಿದ್ದು, ದಾಂಪತ್ಯದಲ್ಲಿ ಹೊಂದಾಣಿಕೆಯಾಗದ ಹಿನ್ನಲೆ ಕವನ ಅವರು ತವರು ಮನೆಯಲ್ಲಿದ್ದರು. ಈ ವಿಚಾರ ತಿಳಿದು ಮಾ. 13ರಂದು ಖಾಕಿ ಯೂನಿಫಾರಂ ಧರಿಸಿದ ಅಪರಿಚಿತ ಮಹಿಳೆ ಮನೆಗೆ ಬಂದಿದ್ದು, ತನ್ನನ್ನು ಎಸ್ಪಿ ಎಂದು ಪರಿಚಯ ಮಾಡಿಕೊಂಡಿದ್ದಾಳೆ.
ನಿನ್ನ ಮದುವೆಯಾಗಿ 30 ಗ್ರಾಂ ಚಿನ್ನ ಹಾಗು 10 ಲಕ್ಷ ರೂ. ನಷ್ಟ ಮಾಡಿಕೊಂಡಿರುವುದಾಗಿ ಗಂಡನ ಮನೆಯವರು ದೂರು ನೀಡಿದ್ದಾರೆ. ಆ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಬಂದಿದ್ದೇನೆ. ನಿಮ್ಮ ಮಗಳಿಗೆ ಬುದ್ದಿ ಹೇಳಿ, ವಿವಾಹ ವಿಚ್ಛೇದನ ಕೊಡಿಸಿ ಎಂದು ಹೇಳಿರುವ ಮಹಿಳೆ ಕವನ ಅವರ ಮೊಬೈಲ್ ಕಸಿದು ಸ್ವಿಚ್ ಆಫ್ ಮಾಡಿದ್ದಾಳೆ. ನಿನ್ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿ ಖಾಲಿ ಕಾಗದಕ್ಕೆ ಸಹಿ ಮಾಡುವಂತೆ ಒತ್ತಾಯಿಸಿದ್ದಾಳೆ. ನಂತರ ನಿಮ್ಮ ಬಳಿಯಿರುವ ಚಿನ್ನಾಭರಣ ನೀಡಬೇಕೆಂದು ಒತ್ತಾಯ ಮಾಡಿದಾಗ ಕವನ ಅವರು 20 ಗ್ರಾಂ ಚಿನ್ನದ ನೆಕ್ಲೆಸ್, 10 ಗ್ರಾಂ ಚಿನ್ನದ ಉಂಗುರ, 2 ಸಾವಿರ ರೂ. ಕೊಟ್ಟಿದ್ದಾರೆ. ಆ ಬಳಿಕ ವಿಚಾರಿಸಿದಾಗ ಮನೆಗೆ ಬಂದಿದ್ದು ನಕಲಿ ಪೊಲೀಸ್ ಎಂಬುದು ತಿಳಿದಿದೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net