

ಸೋಮವಾರಪೇಟೆ: ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ನ್ಯಾಯಾಲಯವು ಆರೋಪಿ ಚಾಲಕನಿಗೆ 1 ವರ್ಷ, 9 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2015ರ ಅ.15ರಂದು ಟಿಂಬರ್ ಕೆಲಸಕ್ಕೆ ತೆರಳಿದ್ದ ರಾಮು ಎಂಬವರು ಸಿಲ್ವರ್ ದಿಮ್ಮಿಗಳನ್ನು ತುಂಬಿದ್ದ ಟ್ರಾೃಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಚಾಲಕ ಒಡೆಯನಪುರದ ಕೆ.ಸಿ.ರಾಜು ಎಂಬಾತನ ಅಜಾಗರೂಕತೆ ಮತ್ತು ಅತಿವೇಗದ ಚಾಲನೆಯಿಂದ ವಡ್ಡರುಕೊಪ್ಪಲು ಗ್ರಾಮದಲ್ಲಿ 20 ಅಡಿ ಆಳದ ತೋಡಿಗೆ ಟ್ರಾೃಕ್ಟರ್ ಮುಗುಚಿಕೊಂಡಿತ್ತು. ಪರಿಣಾಮ ಮರದ ದಿಮ್ಮಿಗಳು ಕಾರ್ಮಿಕ ರಾಮು ಅವರ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಈ ಬಗ್ಗೆ ವಿಚಾರಣೆ ನಡೆಸಿದ ಸೋಮವಾರಪೇಟೆ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಗೋಪಾಲಕೃಷ್ಣ ಚಾಲಕನಿಗೆ 1 ವರ್ಷ 9 ತಿಂಗಳು, 15 ದಿನಗಳ ಕಾಲ ಸಾದಾ ಸಜೆ ಹಾಗೂ 3,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಹೇಮಂತ್ ಪೊನ್ನಪ್ಪ ವಾದ ಮಂಡಿಸಿದ್ದರು.