ಯಳಂದೂರು: ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಇಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಇರಸವಾಡಿ, ಮಸಣಾಪುರ, ಹೊಂಗನೂರು, ಕಾಗಲವಾಡಿ ಮಾರ್ಗವಾಗಿ ಚಾಮರಾಜನಗರಕ್ಕೆ ತೆರಳುವ ಕೆಎಸ್ಸಾರ್ಟಿಸಿ ಬಸ್‌ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಯಳಂದೂರು ಪಟ್ಟಣದ ಬಳೇಪೇಟೆಯ ಸ್ವಾಗತ ಕಮಾನಿನ ಬಳಿ ಇರಸವಾಡಿ ಗ್ರಾಮದ ಇಬ್ಬರು ತಮ್ಮ ಗ್ರಾಮದಲ್ಲಿ ಕೈ ತೋರಿದರೂ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಬಸ್‌ನ್ನು ಅಡ್ಡಗಟ್ಟಿ, ಚಾಲಕನನ್ನು ಕೆಳಕ್ಕೆ ಎಳೆದು ಆತನ ಮುಖಕ್ಕೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆದರೆ ಈ ಮಾರ್ಗವಾಗಿ ಏಕಾಏಕಿ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿಗೆ ಕೇವಲ ಖಾಸಗಿ ಬಸ್‌ಗಳು ಮಾತ್ರ ತೆರಳುತ್ತಿವೆ. ಯಳಂದೂರು ಮಾರ್ಗವಾಗಿ ವೈ.ಕೆ.ಮೋಳೆ, ಇರಸವಾಡಿ, ಚಾಟೀಪುರ, ಮಸಣಾಪುರ, ಹೊಂಗನೂರು, ಕಾಗಲವಾಡಿ, ಆಲೂರು, ಸರಗೂರು, ಚಂದಕವಾಡಿ ಗ್ರಾಮಗಳ ಮೂಲಕ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ಪ್ರತಿನಿತ್ಯ ಇಲ್ಲಿಂದ ಸಾವಿರಾರು ಜನರು ಬಸ್‌ಗಳಲ್ಲಿ ಇಲ್ಲಿಂದ ಸಂಚರಿಸುತ್ತಾರೆ. ಯಳಂದೂರು ಪಟ್ಟಣದಲ್ಲೇ ವ್ಯವಹರಿಸುತ್ತಾರೆ. ಅಲ್ಲದೆ ಈ ಮಾರ್ಗದ ಮೂಲಕವೇ ಕೊಳ್ಳೇಗಾಲ, ಮೈಸೂರು ಮಾರ್ಗವಾಗಿ ಇಲ್ಲಿಂದ ಸಂಚರಿಸುತ್ತಾರೆ. ಶಕ್ತಿ ಯೋಜನೆಯಡಿಯಲ್ಲಿ ಇಲ್ಲಿಂದ ನಿತ್ಯ ನೂರಾರು ಮಹಿಳೆಯರು ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಅದೂ ಇಲ್ಲವಾಗಿದೆ. ಇಲ್ಲಿಗೆ ಖಾಸಗಿ ಬಸ್‌ಗಳ ಸಂಖ್ಯೆಯೂ ಕಡಿಮೆ ಇದೆ. ಹಾಗಾಗಿ ಆಟೋಗಳಲ್ಲಿ ಜನರನ್ನು ಕುರಿಗಳಂತೆ ತುಂಬಿಕೊಂಡ ಹೋಗಲಾಗುತ್ತಿದೆ.
ಚಾಲಕನ ಮೇಲೆ ಹಲ್ಲೆ ಮಾಡಿದ ಕಾರಣದಿಂದ ಬಸ್ ಸಂಚಾರವನ್ನೇ ನಿಲ್ಲಿಸಿರುವುದು ಸೂಕ್ತ ಕ್ರಮವಲ್ಲ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಬಳಿ ಚರ್ಚಿಸಿ ಸೂಕ್ತ ಕ್ರಮ ವಹಿಸಲಾಗುವುದು. ಎಚ್.ವಿ. ಚಂದ್ರು, ಅಧ್ಯಕ್ಷ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ, ಚಾಮರಾಜನಗರ ಬಸ್‌ನ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ನಮ್ಮ ನೌಕರರಿಗೆ ರಕ್ಷಣೆ ನೀಡುವ ಜವಾಬ್ದಾರಿಯೂ ನಮ್ಮ ಮೇಲಿದೆ. ಕ್ಷುಲ್ಲಕ ಕಾರಣಕ್ಕೆ ಮಾಡಿರುವ ಈ ಕೃತ್ಯದಿಂದ ಇಲಾಖೆಯ ನೌಕರರು ಆತಂಕಗೊಂಡಿದ್ದಾರೆ. ನಮಗೆ ಯಾವುದೇ ರಕ್ಷಣೆ ಇಲ್ಲವೆ ಎಂದು ಅವಲತ್ತುಕೊಂಡಿದ್ದಾರೆ. ಹಾಗಾಗಿ ತಾತ್ಕಾಲಿಕವಾಗಿ ಇಲ್ಲಿಗೆ ಬಸ್ ಸೇವೆಯನ್ನು ನಿಲ್ಲಿಸಲಾಗಿದೆ. ಈ ಭಾಗದಲ್ಲಿ ಸಾರ್ವಜನಿಕರಿಗೆ ಇದರ ಮಹತ್ವದ ಅರಿವಾಗಲಿ ಎಂಬ ಕಾರಣಕ್ಕಾಗಿ ಬಸ್ ಸಂಚಾರ ಸ್ಥಗಿತ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಅಶೋಕ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಚಾಮರಾಜನಗರ