

ಬೇಲೂರು : ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಕರೆದೊಯ್ಯುತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಹಲವರು ಗಾಯಗೊಂಡಿರುವ ಘಟನೆ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೋನೇರ‌್ಲು ಗ್ರಾಮದ ರಸ್ತೆ ತಿರುವಿನಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮೈಸೂರಿನ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಗಳನ್ನು ಮೈಸೂರಿನಿಂದ ಬೇಲೂರು ಮಾರ್ಗವಾಗಿ ಹೊರನಾಡು ಹಾಗೂ ಮಂಗಳೂರು ಭಾಗಕ್ಕೆ 40 ವಿದ್ಯಾರ್ಥಿಗಳನ್ನು ಖಾಸಗಿ ಬಸ್ಸಿನಲ್ಲಿ ಪ್ರವಾಸಕ್ಕೆಂದು ಕರೆದೊಯ್ಯುತಿದ್ದಾಗ ತಾಲೂಕಿನ ಕೋನೇರ‌್ಲು ಗ್ರಾಮದ ಸಮೀಪ ರಾತ್ರಿ 2-30 ರ ಸಮಯದಲ್ಲಿ ರಸ್ತೆ ತಿರುವಿನಲ್ಲಿ ತೆರಳುತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಗುದ್ದಿದೆ.
ಇದರಿಂದಾಗಿ ಬಸ್‌ನಲ್ಲಿದ್ದ ಬದಲಿ ಚಾಲಕನಿಗೆ ಗಂಭೀರ ಗಾಯವಾದರೆ, ಇತರೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನು ಗ್ರಾಮಸ್ಥರ ಸಹಕಾರದೊಂದಿಗೆ ಹಾಸನ ಹಾಗೂ ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗಾಗಿ ದಾಖಲಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.