ಚಾಮರಾಜನಗರ : ಹನೂರು ತಾಲೂಕಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ನಾಲ್ ರೋಡ್ ಮಾರ್ಗದ ತಿರುವಿನಲ್ಲಿ ಬುಧವಾರ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಲಾರಿಯೊಂದು ಕಂದಕಕ್ಕೆ ಉರುಳಿ, ಕ್ಲೀನರ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಪ್ರವೀಣ್ (23) ಗಾಯಗೊಂಡವರು. ಬುಧವಾರ ಬೆಳಗ್ಗೆ 9.30ರಲ್ಲಿ ಮುಸುಕಿನ ಜೋಳ ತುಂಬಿದ ಲಾರಿಯು ತಮಿಳುನಾಡಿಗೆ ತೆರಳುತ್ತಿತ್ತು. ನಾಲ್‌ರೋಡ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿಯು ತಡೆಗೋಡೆಗೆ ಡಿಕ್ಕಿ ಹೊಡೆದು ನಂತರ ಕಂದಕಕ್ಕೆ ಉರುಳಿ ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಕ್ಲೀನರ್ ಕಾಲು ಮುರಿತದಿಂದ ಗಾಯಗೊಂಡಿದ್ದಾನೆ. ಸ್ಥಳೀಯರು ಗಾಯಾಳುವನ್ನು ತುರ್ತು ವಾಹನದ ಮೂಲಕ ಕೊಳ್ಳೇಗಾಲದ ಸರ್ಕಾರಿ ಉಪವಿಭಾಗೀಯ ಆಸ್ಪತ್ರೆಗೆ ಕಳುಹಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.