ಚಾಲಕನ ಎಡವಟ್ಟು, ಬಸ್ ನಿಲ್ದಾಣದಲ್ಲಿ ರಾತ್ರಿ ಕಳೆದ ವೃದ್ಧ

ambulance
Published on

ಬಸವಕಲ್ಯಾಣ: ಕರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧರೊಬ್ಬರು ಆಂಬುಲೆನ್ಸ ಚಾಲಕನ ಎಡವಟ್ಟಿನಿಂದ ಆಸ್ಪತ್ರೆಗೂ ಇಲ್ಲ, ಇತ್ತ ಮನೆಗೂ ಮರಳಲು ಸಾಧ್ಯವಾಗದೆ ಅತಂತ್ರ ಸ್ಥಿತಿಗೆ ಸಿಲುಕಿ ಬಸ್ ನಿಲ್ದಾಣದಲ್ಲಿಯೇ ರಾತ್ರಿ ಕಳೆದ ಪ್ರಸಂಗ ನಡೆದಿದೆ.
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ 17 ರಂದು ತಾಲೂಕಿನ ನಿರಗುಡಿ ಗ್ರಾಮದ 76 ವರ್ಷದ ವೃದ್ಧರೊಬ್ಬರು ಬ್ರಿಮ್ಸ ಆಸ್ಪತ್ರೆಗೆ ದಾಖಲಾಗಿದ್ದರು. 18 ರಂದು ಮತ್ತೊಮ್ಮೆ ಇವರ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, ವರದಿ ನೆಗೆಟಿವ್ ಬಂದಿದೆ. ಆದ್ದರಿಂದ 19ರಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆದರೆ ಆಂಬುಲೆನ್ಸನಲ್ಲಿ ವೃದ್ಧನಿಗೆ ಆತನ ಗ್ರಾಮಕ್ಕೆ ಬಿಡದೆ ಭಾಲ್ಕಿ ಬಸ್ ನಿಲ್ದಾಣದಲ್ಲಿಯೇ ಬಿಟ್ಟು ತೆರಳಿದ್ದಾನೆ ಎನ್ನಲಾಗಿದೆ.
ವೃದ್ಧನಿಗೆ ಸೋಮವಾರ ಬೆಳಗ್ಗೆ ಕುಟುಂಬದವರು ಮೊಬೈಲ್ ಕರೆ ಮಾಡಿದರೆ ಆತನ ಮೊಬೈಲ್ ಸ್ವಿಚ್ಆಫ್ ಆಗಿತ್ತು. ಬೀದರ್ ಆಸ್ಪತ್ರೆಗೆ ತೆರಳಿ ವಿಚಾರಿಸಿದ್ದಾರೆ. ಆದರೆ ವೃದ್ಧ ಅಲ್ಲಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಇದರಿಂದ ಮತ್ತಷ್ಟು ಆತಂಕಕ್ಕೆ ಒಳಗಾದ ಕುಟುಂಬಸ್ಥರು ವೃದ್ಧನಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂಜೆ ವೇಳೆಗೆ ಕೊನೆಗೆ ಭಾಲ್ಕಿ ತಾಲೂಕಿನ ವರವಟ್ಟಿಯಲ್ಲಿ ಇರುವುದಾಗಿ ತಿಳಿದು ಬಂದ ನಂತರ ಅಲ್ಲಿಗೆ ತೆರಳಿ ವೃದ್ಧನನ್ನು ಗ್ರಾಮಕ್ಕೆ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.
ನಿರಗುಡಿ ಗ್ರಾಮಕ್ಕೆ ಬಿಡಿ, ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮಕ್ಕಾದರು ಬಿಟ್ಟು ಬನ್ನಿ ಎಂದು ಚಾಲಕನಿಗೆ ವೃದ್ಧ ಕೇಳಿಕೊಂಡಿದ್ದಾನೆ. ಆದರೆ ಆಂಬುಲೆನ್ಸ ಚಾಲಕ ಭಾನುವಾರ ಸಂಜೆ ಭಾಲ್ಕಿ ಬಸ್ ನಿಲ್ದಾಣದಲ್ಲಿಯೇ ಬಿಟ್ಟು ತೆರಳಿದ್ದಾನೆ ಎನ್ನಲಾಗಿದೆ. ಇಡೀ ರಾತ್ರಿ ಬಸ್ ನಿಲ್ದಾಣದಲ್ಲಿಯೇ ಕಾಲ ಕಳೆದ ವೃದ್ಧ ಸೋಮವಾರ ಅಪರಿಚಿತ ಯುವಕನ ಬೈಕ್ ಹತ್ತಿ ವರವಟ್ಟಿ ಗ್ರಾಮದವರೆಗೆ ಬಂದು ಅಲ್ಲೆ ಕುಳಿತಿದ್ದ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net