ಚಾಲಕ ಸೇರಿ ಮಕ್ಕಳಿಗೆ ಗಾಯ

IMG_20250618_095426
Published on

ಕಂಪಲಾಪುರ: ನಿಯಂತ್ರಣ ತಪ್ಪಿದ ಶಾಲಾ ವಾಹನ ಬುಧವಾರ ಬೆಳಗ್ಗೆ ರಸ್ತೆ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಸೇರಿ 16ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.

ಕಂಪಲಾಪುರದ ಖಾಸಗಿ ಶಾಲೆಗೆ ಸೇರಿದ ವಾಹನ ಪಲ್ಟಿಯಾಗಿದೆ. ವಾಹನದಲ್ಲಿ 16ರಿಂದ 20 ಮಕ್ಕಳಿದ್ದರು. ಎಲ್ಲ ಮಕ್ಕಳೂ ಗಾಯಗಳಾಗಿದ್ದು, ಚಾಲಕ ಹಬ್ಬನಕುಪ್ಪೆ ಗ್ರಾಮದ ಶ್ರೀ ನಿವಾಸ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ: ಬುಧವಾರ ಬೆಳಗ್ಗೆ 9 ಗಂಟೆಗೆ ಹಬ್ಬನಕುಪ್ಪೆ ಗ್ರಾಮದಿಂದ ಚಾಲಕ ಶ್ರೀನಿವಾಸ್ ಶಾಲಾ ಮಕ್ಕಳನ್ನು ಕೂರಿಸಿಕೊಂಡು ಕಂಪಲಾಪುರದಲ್ಲಿರುವ ಖಾಸಗಿ ಶಾಲೆಗೆ ಕರೆತರುವಾಗ ನಿಯಂತ್ರಣ ತಪ್ಪಿದ ವಾಹನ ಹಬ್ಬನಕುಪ್ಪೆ-ಹೊಸಕೊಪ್ಪಲು ನಡುವೆ ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಮಕ್ಕಳ ಚೀರಾಟ ಕೇಳಿ ಅಕ್ಕಪಕ್ಕದ ಜಮೀನಿನಲ್ಲಿದ್ದವರು ಹಬ್ಬನಕುಪ್ಪೆ ಗ್ರಾಮದವರಿಗೆ ವಿಷಯ ಮುಟ್ಟಿಸಿದ್ದಾರೆ.

ಕಾರು, ಸ್ಕೂಟರ್‌ಗಳಲ್ಲಿ ತಕ್ಷಣ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ವಾಹನದ ಕಿಟಕಿಯಿಂದ ಎಲ್ಲ ಮಕ್ಕಳನ್ನು ಹೊರತೆಗೆದು ತಮ್ಮ ಇತರ ವಾಹನಗಳಲ್ಲಿ ಹುಣಸೂರು ಆಸ್ಪತ್ರೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ತೀವ್ರವಾಗಿ ಗಾಯಗೊಂಡ ಕೆಲ ಮಕ್ಕಳು, ಚಾಲಕ ಶ್ರೀನಿವಾಸ್‌ನನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net