

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ನೂತನ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಮಂಗಳವಾರ ಶ್ರವಣಬೆಳಗೊಳದ ಶ್ರೀ ಕ್ಷೇತ್ರ ಜೈನ ಮಠಕ್ಕೆ ತೆರಳಿದ ಚಾರುಕೀರ್ತಿ ಭಟ್ಟಾರಕ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಹಾಸನದಿಂದ ಶ್ರವಣಬೆಳಗೊಳಕ್ಕೆ ಸಂಸದರು ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಜೈಕಾರ ಹಾಕುವ ಮೂಲಕ ಬರಮಾಡಿಕೊಂಡರು. ಜೈನ ಮಠಕ್ಕೆ ಆಗಮಿಸುತ್ತಿದ್ದಂತೆ ಮಂಗಳವಾದ್ಯ ಗೋಷ್ಠಿಗಳ ನಡುವೆ ಸಂಸದರನ್ನು ಶ್ರೀ ಮಠಕ್ಕೆ ಆಹ್ವಾನಿಸಲಾಯಿತು. ಬಳಿಕ ಕೃಷಿ ದೇವಿಗೆ ಪೂಜೆ ಸಲ್ಲಿಸಿದ ಮಠದ ಪೀಠಾಧ್ಯಕ್ಷರಾದ ಭಟ್ಟಾರಕ ಶ್ರೀಗಳನ್ನು ಭೇಟಿ ಮಾಡಿ ಶ್ರೇಯಸ್ ಪಟೇಲ್ ಕೆಲಕಾಲ ಸ್ವಾಮೀಜಿ ಜತೆಗೆ ಮಾತುಕತೆ ನಡೆಸಿ, ಆಶೀರ್ವಾದ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೇಯಸ್ ಪಟೇಲ್, ಮೊದಲ ಬಾರಿಗೆ ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ನನ್ನ ಮತದಾರ ಬಂಧುಗಳಿಗೆ, ನನ್ನ ಕಾರ್ಯಕರ್ತರಿಗೆ ಮತ್ತು ನನ್ನನ್ನು ಇಷ್ಟು ದೊಡ್ಡ ಅಂತರದಿಂದ ಗೆಲುವು ತಂದುಕೊಟ್ಟ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ. ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗೆ ನಾನು ಸದಾ ಮುಂಚೂಣಿಯಲ್ಲಿದ್ದು, ಸರ್ಕಾರದಿಂದ ಸಿಗುವ ಅನುದಾನದಿಂದ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮುಂದಿನ ದಿನಗಳಲ್ಲಿ ಬರುವ ಚಿಕ್ಕಬೆಟ್ಟ ಮಹೋತ್ಸವದ ಅಂಗವಾಗಿ ಶ್ರೀಗಳು ಕೆಲ ಹೊತ್ತು ಮಾತುಕತೆ ನಡೆಸಿದರು. ಅದಕ್ಕೆ ನನ್ನ ಸಂಪೂರ್ಣ ಸಹಕಾರದೊಂದಿಗೆ ಸರ್ಕಾರದಿಂದಲೂ ಅನುದಾನ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದೆ ವೇಳೆ ಮಾಜಿ ಶಾಸಕ ಗೋಪಾಲಸ್ವಾಮಿ, ಕಾಂಗ್ರೆಸ್ ಮುಖಂಡ ವಾಸಣ್ಣ, ಜನಾರ್ದನ್ ಮುಂತಾದವರು ಹಾಜರಿದ್ದರು.