ಚಾರಿತ್ರ್ಯ ವಧೆ ಮಾಡುತ್ತಾರಾ? ಮಾನ ಹರಾಜು ಹಾಕುವರಾರು? ಪಕ್ಷೇತರ ಅಭ್ಯರ್ಥಿಗೂ ಇದೆಯಾ ಸಿಡಿ ಭಯಾ? ಮಲ್ಲಿಕಾರ್ಜುನ ಲೋಣಿ ಹೇಳಿದ್ದೇನು?

IMG-20211126-WA0050
Published on

ವಿಜಯಪುರ: ಕಾಂಗ್ರೆಸ್-ಬಿಜೆಪಿ ಅವಿರೋಧ ಆಯ್ಕೆಗೆ ಕೊಕ್ಕೆ ಹಾಕಿರುವ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿಗೂ ಸಿಡಿ ಗುಮ್ಮ ಕಾಡುತ್ತಿದೆಯಾ?

ನಾಮಪತ್ರ ಹಿಂಪಡೆಯುವ ಅಂತಿಮ ಕ್ಷಣದವರೆಗೂ ಬಂದ ದೂರವಾಣಿ ಕರೆಗಳ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಲೋಣಿ ಪ್ರಸ್ತಾಪಿಸಿದ್ದು ಇಂಥದ್ದೊಂದು ಸಂಶಯ ಹುಟ್ಟು ಹಾಕಿದೆ.

ನ. 26 ರಂದು ಕೆಲವರು ತಮ್ಮ ಕಾರ್ಯಕರ್ತರ ಮುಂದೆ ಆಡಿರುವ ಮಾತುಗಳ ಬಗ್ಗೆ ಪ್ರಸ್ತಾಪಿಸಿರುವ ಲೋಣಿ ‘ಕಣದಿಂದ ಹಿಂದೆ ಸರಿಯದಿದ್ದರೆ ಮಾನ ಹರಾಜು ಹಾಕುತ್ತೇವೆ, ಚಾರಿತ್ರ್ಯ ವಧೆ ಮಾಡುತ್ತೇವೆ, ಅವರಿಗೆ ನೋಡಿ ಏನೇನೆಲ್ಲಾ ಮಾಡುತ್ತೇವೆ’ ಎಂದಿದ್ದು ನನ್ನ ಗಮನಕ್ಕೆ ಬಂದಿದೆ. ಆದರೂ ಏನಾದರೂ ಆಗಲಿ ಎಂದು ಕಣಕ್ಕಿಳಿದಿದ್ದೇನೆ ಎಂದು ಲೋಣಿ ತಿಳಿಸಿದರು. ಆದರೆ, ಯಾರು? ಯಾರಿಗೆ ಹೇಳಿದರು? ಎಂಬುದನ್ನು ಬಾಯಿಬಿಡಲಿಲ್ಲ.

26ನೇ ತಾರೀಖು ರಾತ್ರಿ ನನ್ನ ಚಾರಿತ್ರೃ ಹರಣ ಮಾಡುವ ಬಗೆಗಿನ ಸುದ್ದಿ ಹರಿ ಬಿಟ್ಟಿದ್ದರು. ಏನಾದರೂ ಆಗಲಿ ಎಂದು ನಾನು ಕಣಕ್ಕಿಳಿದಾಗ ಸುಮ್ಮನಾಗಿದ್ದಾರೆ. ಇವೊತ್ತು ಅವರಿಗೆ ಗೊತ್ತಾಗಿದೆ. ನನ್ನ ಸ್ಪರ್ಧೆ ಹಿಂದೆ ಯಾರೂ ಇಲ್ಲ. ಗ್ರಾಪಂ ಸದಸ್ಯರ ಬೆಂಬಲದಿಂದಲೇ ನಿಂತಿದ್ದಾರೆಂದು ಅರಿವಾಗಿದೆ. ಹೀಗಾಗಿ ಏನಾದರೂ ಕಿತಾಪತಿ ಮಾಡಿ ಅಂಜಿಸಿ ಹಿಂದೆ ಸರಿಸುವ ಕೆಲಸಕ್ಕೆ ಕಡಿವಾಣ ಬಿದ್ದಿದೆ ಎಂದರು.

ಇದೆಲ್ಲಾ ನೋಡಿದಾಗ ಲೋಣಿ ಅವರದ್ದೂ ಖಾಸಗಿ ವಿಡಿಯೋ ಬಿಡುಗಡೆ ಬಗ್ಗೆ ತೆರೆ ಮರೆಯಲ್ಲಿ ಕಸರತ್ತು ನಡೆದಿತ್ತಾ? ಎಂಬ ಗುಮಾನಿ ಶುರುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net