

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮಾಂತರ ಜಿಲ್ಲೆಯ ಪ್ರಮುಖ ತಾಣವಾಗಿರುವ ದೊಡ್ಡಬಳ್ಳಾಪುರ ತಾಲೂಕು ಮಾಕಳಿ ದುರ್ಗದಲ್ಲಿ ಚಾರಣಕ್ಕಾಗಿ ಆರಂಭಿಸಿರುವ ಆನ್‌ಲೈನ್ ಟಿಕೆಟ್‌ನಲ್ಲಿ ಕಾಳದಂಧೆ ಎಡೆಬಿಚ್ಚಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಜಿಲ್ಲಾ ಅರಣ್ಯ ಇಲಾಖೆ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಿದೆ.
ಜಿಲ್ಲೆಯಲ್ಲಿ ನೆಲಮಂಗಲ ತಾಲೂಕು ದಾಬಸ್‌ಪೇಟೆಯಲ್ಲಿನ ಶಿವಗಂಗೆ, ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿಯ ಕುಂದಾಣ ಏಕಶಿಲಾ ಬೆಟ್ಟ ಹಾಗೂ ದೊಡ್ಡಬಳ್ಳಾಪುರ ತಾಲೂಕು ಮಾಕಳಿ ದುರ್ಗ ಬೆಟ್ಟದ ಪ್ರಮುಖ ಚಾರಣ ತಾಣಗಳಾಗಿವೆ. ಇವುಗಳಲ್ಲಿ ಶಿವಗಂಗೆ ಹಾಗೂ ಕುಂದಾಣ ಬೆಟ್ಟದಲ್ಲಿ ಚಾರಣಕ್ಕೆ ಯಾವುದೇ ಟಿಕೆಟ್ ವ್ಯವಸ್ಥೆ ಇಲ್ಲ. ಆದರೆ ಮಾಕಳಿ ದುರ್ಗದ ಚಾರಣಕ್ಕೆ ಟಿಕೆಟ್ ನಿಗಧಿಯಾಗಿದ್ದು, ಕೆಲವರು ಇದನ್ನು ದುರುಪಯೋಗ ಮಾಡಿಕೊಂಡು ದುಪ್ಪಟ್ಟು ಹಣ ಸುಲಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆನ್‌ಲೈನ್ ಟಿಕೆಟ್ ದೋಖಾ:
ಜಿಲ್ಲೆಯ ಪ್ರಮುಖ ಚಾರಣ ತಾಣವಾಗಿರುವ ಮಾಕಳಿ ದುರ್ಗದಲ್ಲಿ ಚಾರಣಕ್ಕಾಗಿ ಪ್ರವಾಸಿಗರಿಗೆ 300 ರೂ. ದರ ನಿಗಧಿ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದು ಚಾರಣ ಮಾಡಬಹುದಾಗಿದೆ. ಆದರೆ ಕೆಲವರು ಹತ್ತಿಪ್ಪತ್ತು ಟಿಕೆಟ್‌ಗಳನ್ನು ಒಟ್ಟಿಗೆ ಪಡೆದು ಅದನ್ನು ಇನ್ನಿತರ ಪ್ರವಾಸಿಗರಿಗೆ ಬ್ಲಾಕ್‌ನಲ್ಲಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಜಿಲ್ಲಾ ಅರಣ್ಯ ಇಲಾಖೆ ಟಿಕೆಟ್ ತಪಾಸಣೆಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಿದೆ.
ಆಧಾರ್, ಇನ್ನಿತರ ದಾಖಲೆ ಪರಿಶೀಲನೆ: ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದವರು ಅರಣ್ಯ ಸಿಬ್ಬಂದಿಗೆ ಆಧಾರ್ ಕಾರ್ಡ್ ತೋರಿಸಬೇಕಿದೆ, ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದವರ ಆಧಾರ್ ಇದ್ದರೆ ಮಾತ್ರ ಟಿಕೆಟ್‌ಗೆ ಮಾನ್ಯತೆ ದೊರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಧಾರ್ ಜತೆಗೆ ಇನ್ನಿತರ ದಾಖಲೆಗಳ ಪರಿಶೀಲನೆಗೂ ಕ್ರಮಕೈಗೊಂಡಿದ್ದು, ಆನ್‌ಲೈನ್ ಟಿಕೆಟ್ ದುರುಪಯೋಗ ತಡೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ವಸ್ತು ಕೊಂಡೋಯ್ದರೆ ದಂಡ: ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನ, ಮದ್ಯ, , ಸಿಗರೇಟ್, ಬೀಡಿ, ಬೆಂಕಿಪೊಟ್ಟಣ ಸೇರಿ ಕೆಲವೊಂದು ವಸ್ತುಗಳನ್ನು ನಿಷೇಧಿಸಲಾಗಿದೆ. ಸಿಬ್ಬಂದಿ ಕಣ್ತಪ್ತಿಸಿ ಇವುಗಳನ್ನು ಚಾರಣ ತಾಣಕ್ಕೆ ಕೊಂಡೋಯ್ದರೆ ಅಂಥ ಚಾರಣಿಗರಿಗೆ ದಂಡ ವಿಧಿಸಲಾಗುತ್ತಿದೆ. ಚಾರಣ ಪ್ರವೇಶದಲ್ಲೇ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದ್ದು, ಅಂಥ ವಸ್ತುಗಳನ್ನು ಜಪ್ತಿ ಮಾಡಿ ಕಸದ ಬುಟ್ಟಿಗೆ ಹಾಕಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
720 ಹೆಕ್ಟೇರ್ ಪ್ಲಾಂಟೇಷನ್:ಪ್ರಸಕ್ತ ಸಾಲಿನ ಜೂನ್‌ನಲ್ಲಿ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿ ಆರಂಭಿಸಿದ ಆಂದೋಲನದಲ್ಲಿ ಸೆಪ್ಟೆಂಬರ್ ಅಂತ್ಯದೊಳಗೆ 720 ಹೆಕ್ಟೇರ್ ಪ್ರದೇಶದಲ್ಲಿ ಪ್ಲಾಂಟೇಷನ್ ಮಾಡಲಾಗಿದೆ. ನೇರಳೆ, ಮಾವು, ಹಲಸು, ಹುಣಸೆ ಸೇರಿ ಅರಣ್ಯ ಸಸಿಗಳನ್ನು ಹಾಕಲಾಗಿದ್ದು, 3 ವರ್ಷ ಇವುಗಳಿಗೆ ಗೊಬ್ಬರ, ನೀರಿನೊಂದಿಗೆ ನಿರ್ವಹಣೆ ಹೊಣೆ ಹೊರಲಾಗಿದೆ, ಸುಮಾರು 10 ಸಾವಿರಷ್ಟು ಸಸಿಗಳನ್ನು ನೆಡಲಾಗಿದ್ದು, 3 ವರ್ಷದ ಅವಧಿಯಲ್ಲಿ ವಿವಿಧ ಕಾರಣಗಳಿಂದ ಹಾಳಾಗಿರುವ ಸಸಿಗಳ ಜಾಗದಲ್ಲಿ ಮತ್ತೆ ಸಸಿಗಳನ್ನು ನೆಟ್ಟು ಪೋಷಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಅರಣ್ಯ ಇಲಾಖೆ ತಿಳಿಸಿದೆ.
ನಕಲಿ ಟಿಕೆಟ್ ಇಲ್ಲ: ಚಾರಣ ತಾಣದಲ್ಲಿ ಆನ್‌ಲೈನ್ ಟಿಕೆಟ್ ದುರುಪಯೋಗವಾಗುತ್ತಿರುವ ಆರೋಪವಿದೆ, ಆದರೆ ಇನ್ನಿತರ ಜಿಲ್ಲೆಗಳಲ್ಲಿ ನಕಲಿ ಟಿಕೆಟ್ ಬಳಸಿ ಚಾರಣ ಮಾಡುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ, ಆದರೆ ಇದು ಸಾಧ್ಯವಿಲ್ಲ, ಆನ್‌ಲೈನ್‌ನಲ್ಲಿ ಟಿಕೆಟ್ ಪ್ರಕ್ರಿಯೆ ನಡೆಯುವುದರಿಂದ ನಕಲು ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
-----------
ದೊಡ್ಡಬಳ್ಳಾಪುರದ ಮಾಕಳಿ ದುರ್ಗ ಚಾರಣ ತಾಣದಲ್ಲಿ ಹೆಚ್ಚುವರಿಯಾಗಿ ಆನ್‌ಲೈನ್‌ನಲ್ಲಿ ಟಿಕೆಟ್ ಪಡೆದು ಇನ್ನಿತರ ಚಾರಣಿಗರಿಗೆ ದುಪ್ಪಟ್ಟು ದರದಲ್ಲಿ ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಇದಕ್ಕೆ ಅವಕಾಶವಿಲ್ಲ, ಆನ್‌ಲೈನ್ ಟಿಕೆಟ್ ಪಡೆದು ಚಾರಣ ಮಾಡುವವರ ಆಧಾರ್ ಸೇರಿ ಇನ್ನಿತರ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಇದರಿಂದ ಇದರ ದುರುಪಯೋಗ ಸಾಧ್ಯವಿಲ್ಲ.
ಸರಿನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂ.ಗ್ರಾಮಾಂತರ