

ಚಾಮರಾಜನಗರ: ಚಾ.ನಗರ ಹಾಲು ಒಕ್ಕೂಟದ ಅಭಿವೃದ್ದಿಗಾಗಿ 80 ಕೋಟಿ ರೂ.ಸಾಲಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಈ ಪೈಕಿ 31ಕೋಟಿ ರೂ.ಬಿಡುಗಡೆಯಾಗಿದ್ದು, ಆ ಸಾಲತೀರಿಸಲು ಪ್ರತಿ ತಿಂಗಳಿಗೆ 65ಲಕ್ಷ ರೂ, ಬಡ್ಡಿ ಕಟ್ಟಲಾಗುತ್ತಿದೆ. ಒಕ್ಕೂಟದಲ್ಲಿ ಮೂಲಬಂಡವಾಳ ವಿಲ್ಲದಿದ್ದರೂ, ಐಸ್‌ಕ್ರೀಂ ಘಟಕ ಸ್ಥಾಪಿಸಲು ಪುನರ್ ಸಾಲಮಾಡುವ ಅವಶ್ಯಕತೆ ಬೇಕೆ ಎಂದು ಚಾಮುಲ್ ಮಾಜಿ ಅಧ್ಯಕ್ಷ ವೈ.ಸಿ.ನಾಗೇಂದ್ರ ಪ್ರಶ್ನಿಸಿದರು.
ನಾಗೇಂದ್ರ ಅವರು ಅಧ್ಯಕ್ಷಸ್ಥಾನ ತ್ಯಜಿಸಿದ ಬಳಿಕ ಒಕ್ಕೂಟದಲ್ಲಿ ಐಸ್‌ಕ್ರೀಂ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. ನಾನು ಅಧ್ಯಕ್ಷನಾಗಿದ್ದಾಗಲೇ ಐಸ್‌ಕ್ರೀಂ ಘಟಕ ಸ್ಥಾಪಿಸುವ ಸಂಬಂಧ ಚರ್ಚೆ ನಡೆದಿತ್ತು. ಆದರೆ ಒಕ್ಕೂಟದಲ್ಲಿ ಮೂಲಬಂಡವಾಳವಿದ್ದರೆ ಐಸ್‌ಕ್ರೀಂ ಘಟಕ ಸ್ಥಾಪಿಸಲು ತಮ್ಮ ಅಭ್ಯಂತರವಿಲ್ಲ. ಸಾಲತಂದು ಘಟಕ ನಿರ್ಮಿಸುವ ವಿಚಾರಕ್ಕೆ ತಮ್ಮ ವಿರೋಧವಿದೆ ಎಂದು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಒಕ್ಕೂಟದಲ್ಲಿ ಈಗಾಗಲೇ ತಯಾರಾಗುವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಲ್ಲ. ಮಾರ್ಕೆಟಿಂಗ್ ಅನುಭವವಿಲ್ಲದ ಅಧಿಕಾರಿಯನ್ನು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಹಾಲಿ ಅಧ್ಯಕ್ಷರು ಸೇರಿದಂತೆ ಕೆಲನಿರ್ದೇಶಕರಿಗೆ ಐಸ್‌ಕ್ರೀಂ ಘಟಕ ಸ್ಥಾಪಿಸಲು ಆಕ್ಸಿಸ್‌ಬ್ಯಾಂಕ್‌ನಲ್ಲಿ 10ಕೋಟಿ ರೂ, ಎಚ್‌ಡಿಎಫ್‌ಸಿಯಲ್ಲಿ 10ಕೋಟಿ ರೂ, ಹಾಲು ಮಹಾಮಂಡಳಿಯಿಂದ 5 ಕೋಟಿ ರೂ, ಸೇರಿದಂತೆ 30 ಕೋಟಿ ಸಾಲಪಡೆಯಲು ಒಕ್ಕೂಟದಿಂದ ತಯಾರಿ ಮಾಡಲಾಗುತ್ತಿದೆ. ಮೊದಲೇ ಚಾಮುಲ್‌ನಲ್ಲಿ ಮೂಲಬಂಡವಾಳವಿಲ್ಲ. ಘಟಕನಿರ್ಮಿಸಲು 50ಕೋಟಿ ರೂ. ವೆಚ್ಚವಾಗುತ್ತದೆ. 30 ಕೋಟಿ ರೂ, ಸಾಲಪಡೆದರೆ, 20 ಕೋಟಿ ರೂ. ಗಳನ್ನು ಹೇಗೆ ತರುತ್ತಾರೆ ಎಂದು ಪ್ರಶ್ನಿಸಿದರು.
ಹಾಲುಉತ್ಪಾದಕರಿಗೆ ತೊಂದರೆಕೊಟ್ಟು, ಐಸ್‌ಕ್ರೀಂ ಘಟಕ ಸ್ಥಾಪನೆಗೆ ರೈತಸಂಘಟನೆಗಳ ವಿರೋಧವಿದೆ. ಒಕ್ಕೂಟ ಸಾಲಮುಕ್ತವಾಗಬೇಕು, ಒಕ್ಕೂಟದ ಅಭಿವೃದ್ದಿಗೆ ದುಡಿಯುವ ಬಂಡವಾಳ ಬೇಕು ಎಂಬುದು ನಮ್ಮ ಆಶಯ. ಹಾಗಾಗಿ ಮೇ. 27ರಂದು ನಗರದಲ್ಲಿ ಹಮ್ಮಿಕೊಂಡಿರುವ
ರೈತಸಂಘಟನೆಗಳ ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲಸೂಚಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ವಿವಿಧ ಹಾಲುಉತ್ಪಾದಕರ ಸಹಕಾರಸಂಘದ ಅಧ್ಯಕ್ಷರಾದ ಹಳ್ಳಿಕೆರೆಹುಂಡಿ ಶಿವಸ್ವಾಮಿ, ಫಣಿಗಾರಮೂರ್ತಿ, ಟಿ.ಹೊಸೂರು ರಾಜು, ಗೌಡಳ್ಳಿಮಹದೇವಪ್ಪ, ರಾಜಣ್ಣ, ಬೂದಿತಿಟ್ಟು ನಾಗರಾಜು ಹಾಜರಿದ್ದರು.