ಚಾಮುಲ್ ಅಧ್ಯಕ್ಷ ನಾಗೇಂದ್ರ ಪದಚ್ಯುತಿ

Published on

ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದ ವೈ.ಸಿ. ನಾಗೇಂದ್ರ ಒಕ್ಕೂಟದ 7 ಸದಸ್ಯರ ವಿಶ್ವಾಸವನ್ನು ಕಳೆದುಕೊಂಡು ಸೋಮವಾರ ಪದಚ್ಯುತಿಯಾಗಿದ್ದಾರೆ.

ಕಳೆದ ಎರಡೂವರೇ ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಮನಿರ್ದೇಶನ ಸದಸ್ಯರ ಬೆಂಬಲದೊಂದಿಗೆ ಅಧ್ಯಕ್ಷರಾಗಿದ್ದ ವೈ.ಸಿ.ನಾಗೇಂದ್ರ ಅವರನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ನಿರ್ದೇಶಕರು ಒಟ್ಟಾಗಿ ಅಧ್ಯಕ್ಷ ಸ್ಥಾನದಿಂದ ಕೆಳಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಧ್ಯಕ್ಷ ವೈ.ಸಿ.ನಾಗೇಂದ್ರ ವಿರುದ್ಧ ಅವಿಶ್ವಾಸವನ್ನು ವ್ಯಕ್ತಪಡಿಸಿ, ಒಕ್ಕೂಟದ 7 ಸದಸ್ಯರು ಸಹಿ ಮಾಡಿ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸಲ್ಲಿಸಿದ್ದರು. ಇದರ ವಿರುದ್ಧ ಅಧ್ಯಕ್ಷರು ನ್ಯಾಯಾಲಯದ ಮೊರೆ ಹೋಗಿ ಒಂದು ತಿಂಗಳ ಕಾಲ ಅವಿಶ್ವಾಸ ನಿರ್ಣಯ ಸಭೆಗೆ ತಡೆಯಾಜ್ಞೆ ತಂದಿದ್ದರು.

ಸದಸ್ಯರು ಗೈರು: ತಾಲೂಕಿನ ಕುದೇರು ಗ್ರಾಮದಲ್ಲಿರುವ ಆಡಳಿತ ಮಂಡಳಿಯ ಕಚೇರಿಯಲ್ಲಿ ಸಹಕಾರ ಇಲಾಖೆಯ ಎ.ಆರ್.ಶೋಭಾ ಸಮ್ಮುಖದಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಮತ ಹಾಕುವ ವ್ಯವಸ್ಥೆ ಮಾಡಲಾಯಿತು.

ಅದರಂತೆ ಸಭೆಯಲ್ಲಿ ಹಾಜರಿದ್ದ ಚಾಮುಲ್ ನಿರ್ದೇಶಕರಾದ ಎಚ್.ಎಂ.ನಂಜುಂಡಪ್ರಸಾದ್, ನಂಜುಂಡಸ್ವಾಮಿ, ಸದಾಶಿವಮೂರ್ತಿ, ಎಂ.ಪಿ.ಸುನೀಲ್.ಮಹದೇವಪ್ರಸಾದ್, ತಾರೀಕ್ ಅಹಮ್ಮದ್ ಹಾಗೂ ಶೀಲಾ ಪುಟ್ಟರಂಗಶೆಟ್ಟಿ ಅಧ್ಯಕ್ಷರ ಆಡಳಿತ ವಿರುದ್ಧ ಮತ ಚಲಾಯಿಸಿ, ಅವಿಶ್ವಾಸ ಗೊತ್ತುವಳಿಗೆ ಜಯವಾಗುವಂತೆ ನೋಡಿಕೊಂಡರು. ಇಂದಿನ ಸಭೆಗೆ ಅಧ್ಯಕ್ಷ ವೈ.ಸಿ.ನಾಗೇಂದ್ರ, ಹಿರಿಯ ನಿರ್ದೇಶಕ ಎಚ್.ಎಸ್.ಬಸವರಾಜು ಗೈರು ಹಾಜರಾಗಿದ್ದರು. ಸಭೆಯಲ್ಲಿ ಸಹಕಾರ ಸಂಘಗಳ ಕಚೇರಿ ಅಧೀಕ್ಷಕ ನಾಗೇಂದ್ರ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net