

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಯಪುರ ಹೋಬಳಿಯ ದಾರಿಪುರದಲ್ಲಿ ಜಾತ್ಯತೀತ ಜನತಾದಳ ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರಿಸಿ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶನ ತೋರಿತು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಾರಥ್ಯದಲ್ಲಿ ಹಿನಕಲ್ ಜಂಕ್ಷನ್‌ನಿಂದ ಜಯಪುರದವರೆಗೆ ಜೆಡಿಎಸ್ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು. ನಿಖಿಲ್ ಕುಮಾರಸ್ವಾಮಿ, ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲಲಿತಾ ದೇವೇಗೌಡ, ಹಾಗೂ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಮಾರ್ಗದ ಉದ್ದಕ್ಕೂ ಜೆಡಿಎಸ್ ಕಾರ್ಯಕರ್ತರು ನಾಯಕರಿಗೆ ಹೂಮಳೆ ಸುರಿಸಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಒಬ್ಬಂಟಿಗನಲ್ಲ, ಯಾರೂ ಇಲ್ಲ ಅಂತ ಭಾವಿಸಬೇಡಿ. ಜಿ.ಟಿ.ದೇವೇಗೌಡನಿಗೆ ಜಿ.ಟಿ. ದೇವೇಗೌಡನೇ ಸರಿಸಾಟಿ ಎಂದು ಕ್ಷೇತ್ರದ ಜನರು ಅರಿತಿದ್ದಾರೆ. ಚಾಮುಂಡೇಶ್ವರಿ ಜನರ ಪ್ರೀತಿ ಏನು ಎಂಬುದಕ್ಕೆ ಸಮಾವೇಶದಲ್ಲಿ ಸೇರಿರುವ ಜನರೇ ಸಾಕ್ಷಿಯಾಗಿದೆ. ಕಳೆದ ಬಾರಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಎಚ್.ಡಿ. ಕುಮಾರಸ್ವಾಮಿ ಕುಮಾರ ಪರ್ವ ಮಾಡಿ ನಂತರ ಮುಖ್ಯಮಂತ್ರಿಯಾದರು. ಇದೀಗ ನಿಖಿಲ್ ಕುಮಾರಸ್ವಾಮಿ ಚಾಮುಂಡೇಶ್ವರಿಗೆ ಬಂದಿದ್ದಾರೆ. ಮುಂದೆ ಕುಮಾರಸ್ವಾಮಿ ಅವರು ಚಾಮುಂಡೇಶ್ವರಿಗೆ ಬರುತ್ತಾರೆ. ಚಾಮುಂಡೇಶ್ವರಿ ಜನ ಎರಡು ಬಾರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೀರಿ, ಮೂರನೇ ಬಾರಿಗೂ ಮುಖ್ಯಮಂತ್ರಿ ಮಾಡುತ್ತೀರಿ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ. ದೇವೇಗೌಡರಿಗೆ ಕಾಂಗ್ರೆಸ್ ನಾಯಕರು ಹಾಕಿದ್ದ ಸವಾಲಿಗೆ ನೀವೆಲ್ಲ ಕಳೆದ ಬಾರಿ ಉತ್ತರ ನೀಡಿದ್ದೀರಿ. ಈ ಬಾರಿಯೂ ಅಂತಹದ್ದೇ ಉತ್ತರ ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕರೆ ನೀಡಿದರು.
ಕಳೆದ ಬಾರಿ ನೀವೆಲ್ಲ ತೊಡೆ ತಟ್ಟಿ ಜಿ.ಟಿ. ದೇವೇಗೌಡರನ್ನು ಗೆಲ್ಲಿಸಿದ್ದೀರಿ, ಆ ಮೂಲಕ ಜಿ.ಟಿ. ದೇವೇಗೌಡರಿಗೆ ಐತಿಹಾಸಿಕ ಗೆಲುವು ದೊರೆಯಿತು. ಈ ಬಾರಿ ಜೆಡಿಎಸ್ 40 ರಿಂದ 50 ಸ್ಥಾನಕ್ಕೆ ಸೀಮಿತವಾಗುವುದಿಲ್ಲ, 123 ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಜೆಡಿಎಸ್‌ಗೆ ಶಕ್ತಿ ತುಂಬಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಬ್ಬೊಟ್ಟಿಯಾಗಿ ರಾಜ್ಯ ಸುತ್ತುತ್ತಿದ್ದಾರೆ ಎಂದರು.