

ಮೈಸೂರು: 3ನೇ ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ದುರ್ಗೆಯ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಕರೊನಾ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ನಡುವೆಯೂ ಸರಳವಾಗಿ ಪೂಜಾ ಕಾರ್ಯವನ್ನು ನಡೆಸಲಾಯಿತು.
ಮುಂಜಾನೆ ಗರ್ಭಗುಡಿಯನ್ನು ಸ್ವಚ್ಛಗೊಳಿಸಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮಾಡಿ ತಾಯಿಗೆ ವಿಶೇಷ ಅಲಂಕಾರ ಮಾಡಲಾಯಿತು. ಭಕ್ತರ ಅನುಪಸ್ಥಿತಿಯಲ್ಲೇ ಪೂಜೆ ಸಲ್ಲಿಸಲಾಯಿತು. ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆ ದೇವಸ್ಥಾನದ ಆವರಣದ ಒಳಗೆ ನಡೆಯಿತು. ಧಾರ್ಮಿಕ ವಿಧಿವಿಧಾನಗಳು ಮುಗಿದ ಬಳಿಕ ತದನಂತರ 7.30ರ ಹೊತ್ತಿಗೆ ದೇವಸ್ಥಾನಕ್ಕೆ ಬೀಗ ಹಾಕಲಾಯಿತು.
‘ದೇವಾಲಯಕ್ಕೆ ಪ್ರವೇಶ ನಿಷೇಧವಿದ್ದರೂ ಹೆಚ್ಚಿನ ಜನ ಬರುತ್ತಿದ್ದು, ದೈಹಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಭಕ್ತರು ಮನೆಯಲ್ಲೇ ಇದ್ದು ಪೂಜೆ ಸಲ್ಲಿಸಬೇಕು’ ಎಂದು ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಕೋರಿದರು.
ಸಚಿವರಿಂದಲೇ ಆದೇಶ ಉಲ್ಲಂಘನೆ! ನಿರ್ಬಂಧದ ನಡುವೆಯೂ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಪ್ರತಾಪ್ ಸಿಂಹ, ಸಿನಿಮಾ ನಟ ದರ್ಶನ್ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಆ ಮೂಲಕ ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿದರು.
ಜನಸಾಮಾನ್ಯರಿಗೆ ಒಂದು ನ್ಯಾಯ, ವಿಐಪಿಗಳಿಗೆ ಒಂದು ನ್ಯಾಯ ಎಂಬ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ದೈಹಿಕ ಅಂತರವನ್ನೂ ಕಾಯ್ದುಕೊಳ್ಳಲಿಲ್ಲ.
‘ಆಷಾಢ ಶುಕ್ರವಾರ ಪ್ರಯುಕ್ತ ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುವ ಪದ್ಧತಿಯನ್ನು ಮೈಗೂಡಿಸಿಕೊಂಡಿದ್ದೇನೆ. ಆ ಪ್ರಕಾರ ಈ ಸಲವೂ ಇಲ್ಲಿಗೆ ಭೇಟಿ ನೀಡಿ ದೇವಿ ದರ್ಶನ ಮಾಡಿದ್ದು, ಕರೊನಾ ವೈರಾಣು ಸೃಷ್ಟಿಸಿರುವ ತೊಂದರೆಯನ್ನು ದೂರ ಮಾಡುವಂತೆ ದೇವಿಯ ಬಳಿ ಪ್ರಾರ್ಥಿಸಿಕೊಂಡಿದ್ದೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇನ್ನು ನಟ ದರ್ಶನ್ ಅವರು, ‘ಕರೊನಾ ಪರಿಸ್ಥಿತಿಯಲ್ಲಿ ಪಾಲಿಕೆಯ ಉಪಮೇಯರ್ ಶ್ರೀಧರ್ ಅವರು ನನ್ನನ್ನು ಜತೆಗೆ ಕರೆದುಕೊಂಡು ಬಂದಿದ್ದಾರೆ. ದೇವಸ್ಥಾನದ ಆವರಣದಲ್ಲಿ ಸಿನಿಮಾ ವಿಚಾರ ಮಾತನಾಡಲ್ಲ’ ಎಂದು ಹೇಳಿ ಅಲ್ಲಿಯಿಂದ ನಿರ್ಗಮಿಸಿದರು.