ಚಾಮುಂಡೇಶ್ವರಿಗೆ ನೋಟುಗಳಿಂದ ಅಲಂಕಾರ

SRP _25-02jpg
Published on

ಶ್ರೀರಂಗಪಟ್ಟಣ: ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶಕ್ತಿ ದೇವಿಯನ್ನು ಧನಲಕ್ಷ್ಮೀ ಅವತಾರದಲ್ಲಿ ಅಲಂಕರಿಸಿ ವಿಶೇಷ ಪೂಜೆ ಅರ್ಪಿಸಲಾಯಿತು.

ಪಟ್ಟಣದ ಚಾಮುಂಡೇಶ್ವರಿ ಬೀದಿಯಲ್ಲಿರುವ ದೇಗುಲದಲ್ಲಿ ಮುಂಜಾನೆಯೇ ಬ್ರಾಹ್ಮಿ ಮುಹೂರ್ತದಲ್ಲಿ ಅಧಿದೇವತೆ ಚಾಮುಂಡೇಶ್ವರಿಗೆ ದೇವಾಲಯದ ಪ್ರಧಾನ ಅರ್ಚಕ ಲಕ್ಷ್ಮೀಶ ನೇತೃತ್ವದಲ್ಲಿ ವೈದಿಕರ ತಂಡ ಮಡಿಪೂಜೆ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು.

ಚಾಮುಂಡಿದೇವಿಯ ಭಕ್ತರಿಂದ ಸಂಗ್ರಹಿಸಿದ್ದ 10, 20, 50, 100, 200, 500 ರೂ.ಗಳ ಮುಖಬೆಲೆ (ಒಟ್ಟು 2.50 ಲಕ್ಷ ರೂ.) ನೋಟುಗಳಿಂದ ವಿಶೇಷವಾಗಿ ದೇವಿಯ ಮೂರ್ತಿ ಹಾಗೂ ದೇವಾಲಯವನ್ನು ಅಲಂಕರಿಸಲಾಗಿತ್ತು. ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಜನದಟ್ಟಣೆ: ಪಟ್ಟಣದ ಮುಖ್ಯರಸ್ತೆಯಲ್ಲಿನ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಲಕ್ಷ್ಮೀದೇವಿಗೆ ಅರ್ಚಕ ಕೃಷ್ಣ ನೇತೃತ್ವದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಕುಂಕುಮ-ಬಳೆ ವಿತರಣೆ ಜತೆಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಟ್ಟಣ ಸಮೀಪದ ಗಂಜಾಂನ ನಿಮಿಷಾಂಬ ದೇವಾಲಯಕ್ಕೂ ಭಕ್ತರು ಆಗಮಿಸಿ ಕಾವೇರಿ ನದಿಯಲ್ಲಿ ಮಿಂದು ದೇವಿಯ ದರ್ಶನ ಪಡೆದರು.

ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿಯ ಶ್ರೀ ಮಹಾಕಾಳಿ ದೇವಾಲಯದಲ್ಲೂ ರೌದ್ರ ಸ್ವರೂಪಿಣಿ ಶಕ್ತಿ ದೇವಿ ಕಾಳಿ ಮೂರ್ತಿಯನ್ನು ಸಹ ವಿವಿಧ ಮುಖಬೆಲೆಯ ಹಣದ ನೋಟುಗಳಿಂದ ವರ್ಣ ರಂಜಿತವಾಗಿ ಅಲಂಕರಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ದೇಗುಲಕ್ಕೆ ಆಗಮಿಸಿದ್ದ ಮಹಿಳಾ ಭಕ್ತರಿಗೆ ದೇವಾಲಯದ ವತಿಯಿಂದ ವಿಶೇಷವಾಗಿ ಪೂಜಿಸಿಟ್ಟಿದ್ದ ನಾಣ್ಯಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net