

ಮೈಸೂರು: ‘ಜೆಡಿಎಸ್‌ನಲ್ಲೇ ಉಳಿಯುವೆ’ ಎಂದು ಘೋಷಣೆ ಮಾಡಿದ ಮರುದಿನವೇ ಶಾಸಕ ಜಿ.ಟಿ.ದೇವೇಗೌಡ ಅವರು ಮೈಸೂರು ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಪ್ರಕಟಿಸಿದರು.
ಮಾಜಿ ಪ್ರಧಾನಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರೊಂದಿಗೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಪಟ್ಟಿಯ ವಿವರಗಳನ್ನು ನೀಡಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ, ಪುತ್ರ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಹುಣಸೂರಿನಲ್ಲಿ ಕಣಕ್ಕಿಳಿಯಲಿದ್ದಾರೆ. ಕೆ.ಆರ್.ನಗರಕ್ಕೆ ಶಾಸಕ ಸಾ.ರಾ.ಮಹೇಶ್, ಪಿರಿಯಾಪಟ್ಟಣಕ್ಕೆ ಶಾಸಕ ಕೆ.ಮಹದೇವ್, ತಿ.ನರಸೀಪುರಕ್ಕೆ ಶಾಸಕ ಅಶ್ವಿನ್‌ಕುಮಾರ್, ಎಚ್.ಡಿ.ಕೋಟೆಯಲ್ಲಿ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್‌ಗೆ ಟಿಕೆಟ್ ಬಹುತೇಕ ಅಂತಿಮವಾಗಿದೆ ಎಂದು ಮಾಹಿತಿ ನೀಡಿದರು.
ಎಚ್.ಡಿ.ದೇವೇಗೌಡರು ನನ್ನ ಮನೆಗೆ ಬಂದ ದಿನವಾದ ಗುರುವಾರದಿಂದಲೇ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. 3 ವರ್ಷಗಳ ನಂತರ ಮನಸ್ಸು ಸಮಾಧಾನದಲ್ಲಿದೆ. ನಾನು ಮತ್ತು ಕುಟುಂಬದವರು ಹೆಚ್ಚು ಖುಷಿಯಲ್ಲಿದ್ದೇವೆ. ಇನ್ನೂ ಯಾವ ಗೊಂದಲವೂ ಉಳಿದಿಲ್ಲ ಎಂದು ಹರ್ಷದಿಂದ ಹೇಳಿದರು.
ಚಾಮುಂಡಿ ತಾಯಿಗೆ ಎಚ್.ಡಿ.ದೇವೇಗೌಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ‘ಇನ್ನೊಂದು ತಿಂಗಳಿನಲ್ಲಿ ನಾನು ಚೆನ್ನಾಗಿ ನಡೆಯುವಂತೆ ಶಕ್ತಿ ಕೊಡು’ ಎಂದು ಬೇಡಿಕೊಂಡಿದ್ದಾರೆ. ಜನವರಿಯಲ್ಲಿ ಚಂಡಿಕಾ ಹೋಮ ನಡೆಸಲಿದ್ದಾರೆ. ಅವರ ಉತ್ಸಾಹ ಕಂಡು ನಾವೇ ಅಚ್ಚರಿಗೆ ಒಳಗಾಗಿದ್ದೇವೆ. ಅವರೇ ನಮಗೆ ಪ್ರೇರಣೆ. ಅವರನ್ನು ಸಂತೋಷವಾಗಿಡುವುದೇ ನಮ್ಮ ಸಂತೋಷ ಎಂದರು.
ಅಪಸ್ವರ ಕೇಳಿಬಂದರೆ ಸಹಿಸಲ್ಲ ಎಂದ ಎಚ್‌ಡಿಡಿ
ಶಾಸಕ ಜಿ.ಟಿ.ದೇವೇಗೌಡ ನಾಯಕತ್ವದ ಬಗ್ಗೆ ಪಕ್ಷದ ಮಟ್ಟದಲ್ಲಿ ಒಂದೇ ಒಂದು ಅಪಸ್ವರ ಕೇಳಿಬಂದರೂ ನಾನು ಸಹಿಸುವುದಿಲ್ಲ. ಅಪಸ್ವರ ಎತ್ತುವವರು ಹೊರ ಹೋಗಬಹುದು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಖಡಕ್ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಜಿಲ್ಲೆಯ ಎಲ್ಲ ಉಸ್ತುವಾರಿಯನ್ನೂ ಜಿ.ಟಿ.ದೇವೇಗೌಡರಿಗೆ ವಹಿಸಿದ್ದೇವೆ. ಇಲ್ಲಿ ಅವರ ನಾಯಕತ್ವದಲ್ಲೇ ಎಲ್ಲವೂ ನಡೆಯುತ್ತದೆ. ಅವರ ತೀರ್ಮಾನವೇ ಅಂತಿಮ. ಈ ಬಗ್ಗೆ ಕೊಂಕು ಮಾತನಾಡಿದರೆ ನಾನು ಸಹಿಸುವುದಿಲ್ಲ ಎಂದು ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ರವಾನಿಸಿದರು.