

ಚನ್ನರಾಯಪಟ್ಟಣ: ಚಾಮುಂಡೇಶ್ವರಿ ಶುಗರ್ಸ್‌ನ ಕಾರ್ಯ ಪ್ರಾರಂಭಗೊಂಡ ಬಳಿಕ ತಾಲೂಕಿನ ಕಬ್ಬು ಬೆಳೆಗಾರರ ಬದುಕು ಹಸನಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲೂಕಿನ ಶ್ರೀನಿವಾಸಪುರ ಬಳಿಯಿರುವ ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಕಬ್ಬು ಅರೆಯುವ ಕಾರ್ಯ ನಿಂತಿದ್ದ ವೇಳೆ ರೈತರಿಗೆ ಸಂಕಷ್ಟವಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಯೊಂದಿಗೆ ನವೀಕರಣಗೊಳಿಸಿದ್ದು, ದಿನವೊಂದಕ್ಕೆ 5ರಿಂದ 8 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ಇದರಿಂದ ಸಮಸ್ಯೆ ಬಗೆಹರಿದಿದ್ದು ಯಾವುದೇ ಗೊಂದಲವಿಲ್ಲದಂತೆ ಕಬ್ಬು ಕಟಾವು ಹಾಗೂ ಅರೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ವಡ್ಡರಹಳ್ಳಿ ರಾಜಣ್ಣ ಮಾತನಾಡಿ, ಕಾರ್ಖಾನೆಯ ಬಾಡಿಗೆ ಹಣವನ್ನು ಸಮರ್ಪಕವಾಗಿ ಕಟ್ಟುತ್ತಿಲ್ಲ. ಬಾಕಿ ಇರುವ ಗುತ್ತಿಗೆ ಹಣದ ಜತೆ ಬಡ್ಡಿ ಸಮೇತ ಕಟ್ಟಿಸಿಕೊಳ್ಳಬೇಕು. ಹೊಸ ಷೇರುದಾರರಿಗೂ ಕೂಡ ಸಕ್ಕರೆ ವಿತರಿಸಬೇಕು. ಕಬ್ಬು ಬೆಳೆಯುತ್ತಿರುವ ರೈತರು ಷೇರುದಾರರಾಗಿ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದು, ಮರಣ ಹೊಂದಿದಲ್ಲಿ ಆತನಿಗೆ ಕಾರ್ಖಾನೆ ವತಿಯಿಂದ ಹಣ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ನಿರ್ದೇಶಕ ಸಾಸಲುಪುರದ ಶಿವರಾಂ ಮಾತನಾಡಿ, ಬಾಡಿಗೆ ಹಣ 20 ಕೋಟಿ ರೂ. ಬಾಕಿ ಇದೆ. ಪ್ರತಿದಿನ ನಗದು ಪುಸ್ತಕ ದಾಖಲು ಮಾಡಬೇಕು. ಪೆಟ್ರೋಲ್ ಬಂಕ್‌ನಿಂದ ಪಡೆದಿರುವ ಹಣವನ್ನು ಕೂಡಲೇ ಕಟ್ಟಿಸಬೇಕು. ಕಾರ್ಖಾನೆಯ ಜಾಗ ಒತ್ತುವರಿ ಆಗದಂತೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಗನ್ನಿ ಗಿರೀಶ್, ರೈತ ಸಂಘದ ಮುಖಂಡ ಅರಳಾಪುರ ಮಂಜೇಗೌಡ ಮಾತನಾಡಿದರು. ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ್, ಸಹಕಾರ ಸಂಘಗಳ ಉಪನಿಬಂಧಕ ಜಿ.ವಿಕ್ರಂ ರಾಜ ಅರಸ್, ಉಪಾಧ್ಯಕ್ಷ ಬಿ.ಜೆ. ಕೃಷ್ಣೇಗೌಡ, ನಿರ್ದೇಶಕರಾದ ಎನ್.ಸಿ. ನಾರಾಯಣಗೌಡ, ಬಿ.ಸಿ. ಮಂಜುನಾಥ, ಬಿ.ಎಲ್. ತೇಜಸ್ವಿ ಕಿರಣ್, ಕೆ.ಎಂ. ಜಯರಾಮ್, ಎಚ್.ಎನ್. ದೇವೇಗೌಡ, ಎಸ್.ಕೆ. ಶಿವಣ್ಣ, ಕೆ.ಟಿ. ಯೋಗ ನಂಜುಂಡ, ಸಿ.ಸಿ. ರವೀಶ, ಮುತ್ತಿಗೆ ರಾಜೇಗೌಡ, ನಾರಾಯಣ, ಕೆ.ಆರ್. ಮಂಜುನಾಥ, ಗಂಗಾಧರ, ಭಾರತಿ, ಲಕ್ಷ್ಮೀದೇವಿ ಇತರರು ಇದ್ದರು.