ಚಾಮುಂಡೇಶ್ವರಿ, ವರುಣದಲ್ಲಿ ಅಭ್ಯರ್ಥಿ ಕಣಕ್ಕಿಳಿಸಲು ಸರ್ವೋದಯ ಕರ್ನಾಟಕ ಪಕ್ಷ ಚಿಂತನೆ

9
Published on

ಮೈಸೂರು: ವರುಣ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸರ್ವೋದಯ ಕರ್ನಾಟಕ ಪಕ್ಷ ಚಿಂತನೆ ನಡೆಸಿದೆ.


ನಗರದ ಬಲ್ಲಾಳ್ ವೃತ್ತದಲ್ಲಿರುವ ಬುದ್ಧ ವಿಹಾರ ಸಭಾಂಗಣದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.


2023ರ ವಿಧಾನಸಭೆ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸುವ ಸಂಬಂಧ ಜಿಲ್ಲಾ ಮಟ್ಟದಲ್ಲಿ ನಿರ್ಣಯ ಕೈಗೊಂಡು ಮಾ. 30ರೊಳಗೆ ಆಕಾಂಕ್ಷಿಗಳ ಪಟ್ಟಿಯನ್ನು ಸಲ್ಲಿಸುವಂತೆ ಸಂಘದ ಜಿಲ್ಲಾ ಸಮಿತಿಗೆ ಸೂಚಿಸಲಾಗಿತ್ತು. ರಾಜ್ಯ ಸಮಿತಿ ಸೂಚನೆ ಮೇರೆಗೆ ನಡೆದ ಸಭೆಯಲ್ಲಿ ಚಾಮುಂಡೇಶ್ವರಿ ಮತ್ತು ವರುಣ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು. ಎರಡು ಕ್ಷೇತ್ರಗಳ ವ್ಯಾಪ್ತಿಯ ಮುಖಂಡರು ತಾಲೂಕು ಮಟ್ಟದಲ್ಲಿ ಸಭೆ ನಡೆಸಿ ಅಂತಿಮ ನಿರ್ಧಾರವನ್ನು ತಿಳಿಸುವಂತೆ ಬಡಗಲಪುರ ನಾಗೇಂದ್ರ ಸೂಚಿಸಿದರು.


ಜನವಿರೋಧಿ ಸರ್ಕಾರಗಳನ್ನು ನೋಡಿದ್ದೇವೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತ ವಿರೋಧಿ ನೀತಿಗಳನ್ನು ಅನುರಿಸುತ್ತಿರುವ ಬಿಜೆಪಿ ವಿರುದ್ಧವಾಗಿ ಸರ್ವೋದಯ ಕರ್ನಾಟಕ ಪಕ್ಷ ಇದೆ ಎಂದು ಹೇಳಿದರು.


ಸರ್ವೋದಯ ಪಕ್ಷದಿಂದ ಸ್ಪರ್ಧಿಸಲು ಯಾವುದೇ ಅಭ್ಯಂತರವಿಲ್ಲ. ಆದರೆ, ಅಭ್ಯರ್ಥಿಗಳಾದವರು ರೈತ ಸಂಘ ಮತ್ತು ಸರ್ವೋದಯ ಪಕ್ಷದ ನಿಲುವುಗಳಿಗೆ ಬದ್ಧರಾಗಿರಬೇಕು. ರಾಜಕೀಯ ಪಕ್ಷಗಳ ವೇದಿಕೆ ಹತ್ತಬಾರದು. ಸಂಪನ್ಮೂಲವನ್ನು ಸ್ಥಳೀಯವಾಗಿ ಸಂಗ್ರಹಿಸಿ ಚುನಾವಣೆ ಎದುರಿಸಬೇಕು ಎಂದು ಹೇಳಿದರು


ರೈತ ಸಂಘದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ನಂಜನಗೂಡು ತಾಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ಮೈಸೂರು ತಾಲೂಕು ಅಧ್ಯಕ್ಷ ಆನಂದೂರು ಪ್ರಭಾಕರ್, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಮಹದೇವನಾಯ್ಕ, ಸರಗೂರು ತಾಲೂಕು ಅಧ್ಯಕ್ಷ ಸಿಂಗೇಗೌಡ, ಅಕ್ಕಮಹಾದೇವಿ, ನಾಗಹಳ್ಳಿ ವಿಜಯೇಂದ್ರ, ಮಂಡಕಳ್ಳಿ ಮಹೇಶ್, ನಾಗನಹಳ್ಳಿ ಚಂದ್ರಶೇಖರ್, ಎ.ರಾಘವೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net