ಚಾಮುಂಡಿಬೆಟ್ಟದಲ್ಲೂ ವಸ್ತ್ರಸಂಹಿತೆ ಜಾರಿಗೊಳ್ಳಲಿ: ಯದುವೀರ್

mysore
Published on

ಮೈಸೂರು: ಚಾಮುಂಡಿಬೆಟ್ಟಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ಭೇಟಿ ನೀಡಿ ಆಷಾಢ ಶುಕ್ರವಾರದ ಪ್ರಯುಕ್ತ ಕೈಗೊಂಡಿರುವ ವ್ಯವಸ್ಥೆಯನ್ನು ವೀಕ್ಷಿಸಿದರು.

ನಾಡಿನ ಅಧಿದೇವತೆಯ ದರ್ಶನ ಪಡೆದ ಯದುವೀರ್ ಅವರು, ಜು.4ರಂದು ಆಷಾಢ ಮಾಸದ 2ನೇ ಶುಕ್ರವಾರದ ಪ್ರಯುಕ್ತ ಬೆಟ್ಟದಲ್ಲಿ ಮಾಡಿರುವ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿದರು.

ಆಷಾಢ ಮಾಸದ ಮೊದಲ ಶುಕ್ರವಾರ ದರ್ಶನದ ವೇಳೆ ಅವ್ಯವಸ್ಥೆ ವಿಚಾರ ಕೇಳಿ ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅವರು, 2000 ರೂ. 300 ರೂ. ಟಿಕೆಟ್, ಸಾಮಾನ್ಯ ದರ್ಶನ ವ್ಯವಸ್ಥೆಯನ್ನು ನೋಡಿದರು. ಶ್ರೀ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರಿಂದ ಮಾಹಿತಿ ಪಡೆದುಕೊಂಡರು. ಮೊದಲ ಆಷಾಢ ಶುಕ್ರವಾರ ಕಂಡುಬಂದಿದ್ದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಷಾಢ ಮಾಸದ ಶುಕ್ರವಾರಗಳಲ್ಲಿ ವಿಶೇಷ ದರ್ಶನಕ್ಕೆ 2000 ರೂ. ನಿಗದಿಪಡಿಸಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಟಿಕೆಟ್ ಪರಿಷ್ಕರಣೆ ಆಗಬೇಕು. ಚಾಮುಂಡೇಶ್ವರಿ ದರ್ಶನ ಎಲ್ಲರಿಗೂ ಸಿಗಬೇಕು. ಆ ನಿಟ್ಟಿನಲ್ಲಿ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದರು.

ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರುವಾಗ ಚಿಕ್ಕದೇವಸ್ಥಾನದಲ್ಲಿ ಒಂದಷ್ಟು ಅನನುಕೂಲ ಆಗುವುದು ಸಹಜ. ಆದರೆ ಅದೆಲ್ಲವನ್ನೂ ಸರಿಪಡಿಸಲು ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು. ಬಾದಾಮಿ ಹಾಲು ಮತ್ತು ಡ್ರೈ ಫ್ರೂಟ್ಸ್ ಸಾಕಷ್ಟು ಜನರಿಗೆ ಸಿಕ್ಕಿಲ್ಲ. ಪ್ರಾಧಿಕಾರವು ಈ ಗೊಂದಲ ಸರಿಪಡಿಸುವುದಾಗಿ ಹಾಗೂ ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂಬುದಾಗಿ ಪ್ರಾಧಿಕಾರ ತಿಳಿಸಿದೆ ಎಂದರು.

ಚಾಮುಂಡಿಬೆಟ್ಟದಲ್ಲೂ ವಸ್ತ್ರ ಸಂಹಿತೆ ಜಾರಿಯಾಗಬೇಕು ಎಂದು ಸಂಸದ ಯದುವೀರ್ ಹೇಳಿದರು. ನಾನು ಇದರ ಪರವಾಗಿ ಯಾವಾಗಲೂ ಇದ್ದು, ಧಾರ್ಮಿಕ ಕ್ಷೇತ್ರಗಳಿಗೆ ಬಂದಾಗ ಜನರು ಧಾರ್ಮಿಕ ಭಾವನೆಯಿಂದಲೇ ಬರಬೇಕು. ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹೀಗಾಗಿ, ವಸ್ತ್ರ ಸಂಹಿತೆ ಅನುಷ್ಠಾನಕ್ಕೆ ಬರಲಿ ಎಂದರು.

ತಿರುಪತಿ ಮಾದರಿಯಲ್ಲಿ ಚಾಮುಂಡಿಬೆಟ್ಟದಲ್ಲೂ ಮೊಬೈಲ್ ನಿರ್ಬಂಧ ಮಾಡಬೇಕು. ಇತ್ತೀಚೆಗೆ ಕೆಲವರು ಗೊತ್ತಿದ್ದೋ ಗೊತ್ತಿಲ್ಲದೆಯೋ ದೇವಿಯ ಮೂಲ ವಿಗ್ರಹದ ವಿಡಿಯೋ ಮಾಡುತ್ತಿದ್ದಾರೆ. ಇದು ಧಾರ್ಮಿಕ ಕ್ಷೇತ್ರದ ಪಾವಿತ್ರೃತೆಗೆ ಧಕ್ಕೆ ತರುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಸೂಕ್ತ ಕಾನೂನು ಜಾರಿ ಮಾಡಬೇಕು ಎಂದು ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net