

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಶ್ರೀ ಮಹಾಬಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಶ್ರೀ ಚಾಮುಂಡೇಶ್ವರಿ ಅಮ್ಮನವರ ಸಮೂಹ ದೇವಸ್ಥಾನದ ವತಿಯಿಂದ ಬೆಳಗ್ಗೆ 6.45 ರಿಂದ 7.15ರವೆರೆಗೆ ರಥೋತ್ಸವ ಸರಳವಾಗಿ ನಡೆಯಿತು.
ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಜರುಗಿದ ಈ ಉತ್ಸವಕ್ಕೆ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು, ಸಾರ್ವಜನಿಕರು, ಪ್ರವಾಸಿಗರು ಸಾಕ್ಷಿಯಾದರು. ಸಂಜೆ ಹಂಸವಾಹನ ಹಾಗೂ ರಾತ್ರಿ ನಟೇಶೋತ್ಸವ ನೆರವೇರಿತು.
ಮಾ.14ರಂದು ಸಂಜೆ ಆಶ್ವಾರೋಹಣ, ರಾತ್ರಿ ಭೂತವಾಹನ, 15ರಂದು ಬೆಳಗ್ಗೆ ತೀರ್ಥಸ್ನಾನ ಹಾಗೂ ರಾತ್ರಿ ಪಲ್ಲಕ್ಕಿ ಉತ್ಸವ ಧ್ವಜಾವರೋಹಣ, 16ರಂದು ಶಯನೋತ್ಸವ, 17ರಂದು ಬೆಳಗ್ಗೆ ಮಹಾಭಿಷೇಕ ಮತ್ತು ವೃಷಭ ವಾಹನ ಉತ್ಸವ ನಡೆಯಲಿದೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.