

ಮೈಸೂರು: ಸತತ ಮಳೆಗೆ ಇತ್ತ ನಗರದೊಳಗೆ ಪಾರಂಪರಿಕ ಕಟ್ಟಡಗಳು ಕುಸಿಯುತ್ತಿವೆ. ಅತ್ತ ಚಾಮುಂಡಿ ಬೆಟ್ಟದಲ್ಲೂ ಮತ್ತೆ ಭೂಕುಸಿತವಾಗಿದೆ.
ಬೆಟ್ಟದ ನಂದಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕುಸಿತ ಮರುಕಳಿಸುತ್ತಲೇ ಇದ್ದು, ಗುರುವಾರ ರಾತ್ರಿಯೂ ದೊಡ್ಡ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ. ಈ ರಸ್ತೆ ಮಾರ್ಗ ಸಂಪೂರ್ಣವಾಗಿ ಹಾಳಾಗುವ ಆತಂಕ ಎದುರಾಗಿದೆ.
ಪ್ರವಾಸಿಗರು ಹೆಚ್ಚು ಸೇರುವ ವೀಕ್ಷಣಾ ಗೋಪುರದ ಪಕ್ಕದಲ್ಲೇ ಇದು ಸಂಭವಿಸಿದೆ. 2021ರ ಅಕ್ಟೋಬರ್ 20ರಂದು ಮಳೆಯಿಂದ ಬೆಟ್ಟದ ನಂದಿ ರಸ್ತೆಯಲ್ಲಿ ಮೊದಲ ಭೂಕುಸಿತವಾಗಿತ್ತು. ಸುಮಾರು 60 ಅಡಿಗಳಷ್ಟು ಗುಡ್ಡ ಜಾರಿತ್ತು. ಬಳಿಕ ಸತತ ಮಳೆಗೆ ಇಲ್ಲಿ ಭೂಕುಸಿತವಾಗುತ್ತಲೇ ಸಾಗಿದೆ. ಈ ಕಾರಣದಿಂದ ನಂದಿ ಮಾರ್ಗದ ರಸ್ತೆಯಲ್ಲಿ ವಾಹನ ಮತ್ತು ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ.
ಇತ್ತೀಚೆಗೆ ಭೂಕುಸಿತ ತಡೆಗೆ ಕಾಮಗಾರಿ ಕೈಗೊಳ್ಳಲಾಗಿದೆ. ಒಂದು ಕಡೆ ಈ ಕಾಮಗಾರಿ ನಡೆದಿದ್ದರೆ ಮತ್ತೊಂದೆಡೆ ರಸ್ತೆ ಕುಸಿತವಾಗಿದೆ. ಕಳೆದ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಈ ಹಿಂದೆ ಕುಸಿದಿದ್ದ ಭಾಗದ ಸಮೀಪದಲ್ಲೇ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಈ ಹಿಂದೆ ಕುಸಿದಿದ್ದ ಸ್ಥಳಕ್ಕೆ ಹೊಂದಿಕೊಂಡಂತೆ ಎರಡೂ ಬದಿಯಲ್ಲೂ ಭಾರಿ ಪ್ರಮಾಣದಲ್ಲಿ ಮಣ್ಣು ಹಳ್ಳಕ್ಕೆ ಜಾರಿದೆ.
ಮಳೆ ನೀರು ಇಂಗುವಿಕೆ ಪ್ರಮಾಣ ಹೆಚ್ಚಾಗಿ ತೇವಾಂಶದಿಂದ ಸಡಿಲಗೊಂಡಿದ್ದ ಮಣ್ಣು ಕುಸಿದಿದೆ ಎಂದು ತಜ್ಞರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಮಳೆ ನೀರು ಇಂಗುವಿಕೆ ಪ್ರಮಾಣ ಹೆಚ್ಚಾದಾಗ ಸಡಿಲಗೊಂಡ ಮಣ್ಣು ಕುಸಿಯುವುದು ಸಾಮಾನ್ಯ ಎಂದು ತಂತ್ರಜ್ಞರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಯೋ ಟ್ರೇಲ್ ಟೆಕ್ನಾಲಜಿ ಬಳಸಿ ರಿಟೇನಿಂಗ್ ವಾಲ್ ನಿರ್ಮಿಸುವ ಮೂಲಕ ಬೆಟ್ಟದ ಕುಸಿತ ತಡೆಗಟ್ಟಲು ಕ್ರಮ ವಹಿಸಲಾಗಿದೆ. ಕಲ್ಲು ಹಾಗೂ ಜಿಯೋ ಮೆಸ್ ಹಾಕಿ ವಾಲ್ ಕಟ್ಟಲಾಗುತ್ತಿದೆ. ಇದರಿಂದ ಎಷ್ಟೇ ನೀರು ಹರಿದು ಬಂದರೂ ಕಲ್ಲಿನ ನಡುವೆ ಸುರಕ್ಷಿತವಾಗಿ ಸಾಗುತ್ತದೆ. ಇದರಿಂದ ಕುಸಿತ ಮರುಕಳಿಸುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಾಮಗಾರಿ ಸಮೀಪವೇ ಭೂಕುಸಿತವಾಗುತ್ತಿರುವುದು ಆತಂಕ ಸೃಷ್ಟಿಸಿದೆ.