

ಮೈಸೂರು: ಚಾಮುಂಡಿಬೆಟ್ಟದಲ್ಲಿ ಸೆ.1ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬರಲಿರುವ ಪ್ಲಾಸ್ಟಿಕ್ ನಿಷೇಧದ ಕುರಿತು ಅರಣ್ಯ ಇಲಾಖೆ ವತಿಯಿಂದ ಗುರುವಾರ ಜಾಗೃತಿ ಮೂಡಿಸಲಾಯಿತು.
ವನ್ಯಜೀವಿಗಳ ತಾಣ, ಹಸರೀಕರಣ ವಲಯವಾದ ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಹಾವಳಿ ಅಧಿಕವಾಗಿದೆ. ಇದರಿಂದ ಇಲ್ಲಿನ ಅರಣ್ಯ ಪ್ರದೇಶಕ್ಕೆ ಹಾನಿ ಆಗುತ್ತಿದೆ. ಬೆಟ್ಟದ ಪರಿಸರದಲ್ಲಿ ಜೀವಿಸುತ್ತಿರುವ ಪ್ರಾಣಿ-ಪಕ್ಷಿ ಸಂಕುಲಕ್ಕೂ ಕುತ್ತು ಬಂದಿದೆ.
ಆದ್ದರಿಂದ ಸೆ.1ರಿಂದ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ನಿರ್ಬಂಧಿಸಲಾಗುತ್ತಿದೆ. ಇದರೊಂದಿಗೆ ಬೆಟ್ಟದ ಧಾರ್ಮಿಕ ಪಾವಿತ್ರೃತೆಗೆ ಧಕ್ಕೆಯಾಗುವ ಅನೈತಿಕ ಚಟುವಟಿಕೆಗೂ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಕೆಲ ನಿಯಮ ಜಾರಿ ಮಾಡಲಾಗಿದೆ. ಡಿಆರ್‌ಎಫ್ ಸತೀಶ್ ನೇತೃತ್ವದಲ್ಲಿ ಚಾಮುಂಡಿಬೆಟ್ಟದಲ್ಲಿರುವ ಎಲ್ಲ ಮಳಿಗೆಗಳಿಗೆ ಕರಪತ್ರ ಹಂಚುವ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಯಿತು.
ಬೆಟ್ಟದಲ್ಲಿ ಕಳೆದ 2-3 ದಿನಗಳಿಂದಲೂ ಕರಪತ್ರ ಹಂಚುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಷೇಧ, ಪ್ಲಾಸ್ಟಿಕ್ ಮಾರಾಟಕ್ಕೆ ನಿರ್ಬಂಧ ಕುರಿತು ಜನರಿಗೆ, ಪ್ರವಾಸಿಗರು, ಸ್ಥಳೀಯರಿಗೆ ತಿಳಿಸಲಾಗುತ್ತಿದೆ. ಜತೆಗೆ ಧೂಮಪಾನ, ಮದ್ಯಪಾನ ನಿರ್ಬಂಧ, ಎಲ್ಲೆಂದರಲ್ಲಿ ವಾಹನ ನಿಲುಗಡೆ, ಅರಣ್ಯ ಪ್ರದೇಶಕ್ಕೆ ಅಕ್ರಮ ಪ್ರವೇಶಕ್ಕೆ ಕಡಿವಾಣ ಹಾಕಿರುವ ನಿಬಂಧನೆಗಳನ್ನು ಬೆಟ್ಟದ ನಿವಾಸಿಗಳು, ಮಾರಾಟಗಾರರು ತಿಳಿ ಹೇಳುವ ಮೂಲಕ ಜಾಗೃತಿ ಮೂಡಿಸಲಾಯಿತು.
ಅದರಲ್ಲೂ ಬೆಟ್ಟದಲ್ಲಿರುವ ಪೂಜಾ ಸಾಮಗ್ರಿಗಳ ಮಾರಾಟ ಮಳಿಗೆ, ವಿವಿಧ ಅಂಗಡಿಗಳ ಮಾಲೀಕರಿಗೂ ಕಠಿಣ ಎಚ್ಚರಿಕೆಯನ್ನೂ ನೀಡಲಾಗಿದೆ. ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಮಾರಾಟ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮುನ್ನೆಚ್ಚರಿಕೆ ಕೊಡಲಾಗಿದೆ. ಪ್ಲಾಸ್ಟಿಕ್ ಕವರ್ ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟಕ್ಕೆ ತರದಂತೆ ಮನವೊಲಿಸಲಾಯಿತು.
ಬೆಟ್ಟದ ಸೂಕ್ಷ್ಮ ಪರಿಸರ ವಲಯವನ್ನು ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 76 ಹಾಗೂ 99(1)ರಂತೆ ಹಾಗೂ ಕರ್ನಾಟಕ ಅರಣ್ಯ ನಿಯಮ 1969ರ ನಿಯಮ 69ರಡಿ ಕಾನೂನು ಬಾಹಿರ ಕೃತ್ಯದಲ್ಲಿ ಬಾಗಿಯಾಗುವವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಯಿತು.
ಎಚ್ಚರ ತಪ್ಪಿದರೆ ಜೇಬಿಗೆ ಕತ್ತರಿ
ದಂಡದ ನಿಯಮ ಸೆ.1ರಿಂದಲೇ ಅನುಷ್ಠಾನಕ್ಕೆ ಬರಲಿದೆ. ಬೆಟ್ಟದ ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶಕ್ಕೆ 500 ರೂ., ಬೆಟ್ಟದ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದರೆ 1000 ರೂ., ರಸ್ತೆಯುದ್ದಕ್ಕೂ ಆಹಾರ ಪೊಟ್ಟಣ, ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ ಸೇರಿದಂತೆ ಇನ್ನಿತರ ತ್ಯಾಜ್ಯ ಎಸೆದರೆ 500 ರೂ. ದಂಡ ತೆರಬೇಕಾಗುತ್ತದೆ. ಜತೆಗೆ ಬೆಟ್ಟದ ಮೇಲಿನ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡಿ ಮೊದಲ ಬಾರಿಗೆ ಸಿಕ್ಕಿ ಬಿದ್ದರೆ 2500 ರೂ, ಎರಡನೇ ಬಾರಿ ಸಿಕ್ಕಿ ಬಿದ್ದರೆ 5 ಸಾವಿರ ರೂ., ಮೂರನೇ ಬಾರಿ ಸಿಕ್ಕಿ ಬಿದ್ದರೆ 10 ಸಾವಿರ ರೂ. ದಂಡ ವಿಧಿಸಿ, ಲೈಸೆನ್ಸ್ ರದ್ದು ಮಾಡಲು ಶಿಫಾರಸು ಮಾಡಲಾಗುತ್ತದೆ.
ರಾತ್ರಿ ಹೊತ್ತು ಸಂಚಾರ ನಿಷೇಧ:
ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ, ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಅನಧಿಕೃತವಾಗಿ ಪ್ರವೇಶಿಸುವ ಹೊರಗಿನ ಜನರಿಗೆ 2,500 ರೂ., ಈ ವೇಳೆ ಮದ್ಯಪಾನ, ಧೂಮಪಾನ ಸೇರಿದಂತೆ ಇನ್ನಿತರ ಹಾನಿಕಾರಕ ವಸ್ತುಗಳನ್ನು ಹೊಂದಿದ್ದರೆ 5 ಸಾವಿರ ರೂ. ದಂಡ ಹಾಕಲಾಗುತ್ತದೆ.
ವನ್ಯಪಾಣಿಗಳಿಗೆ ಆಹಾರ ನೀಡುವುದು, ಉಪಟಳ ಮಾಡುವವರಿಗೆ 1 ಸಾವಿರ ರೂ. ಇನ್ನಿತರ ವಿಧದಲ್ಲಿ ಅರಣ್ಯ ಸಂಪತ್ತಿಗೆ ಹಾನಿಯುಂಟು ಮಾಡುವವರಿಗೂ 1 ಸಾವಿರ ರೂ. ದಂಡ ವಿಧಿಸುವುದಾಗಿ ಪ್ರಕಟಿಸಲಾಗಿದ್ದು, ಇದಕ್ಕೆ ಸಾರ್ವಜನಿಕರು ಹಾಗೂ ಬೆಟ್ಟದ ನಿವಾಸಿಗಳು ಸಹಕರಿಸುವಂತೆ ಮನವಿ ಮಾಡಲಾಗಿದೆ.