

ಮೈಸೂರು: ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರ್ಕಾರದ ‘ಪ್ರಸಾದ್’ ಯೋಜನೆಯಡಿ 45.70 ಕೋಟಿ ರೂ. ವೆಚ್ಚದ ವಿಸ್ತೃತ ಕಾಮಗಾರಿಗೆ ಅನುಮೋದನೆ ದೊರೆತಿದೆ.
ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ವಿವಿಧ ಮೂಲಸೌಕರ್ಯ ಒದಗಿಸಲು ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ 2021ರ ಜನವರಿ 27ರಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2022ರ ಸೆಪ್ಟೆಂಬರ್ 1ರಂದು ನಡೆದಿದ್ದ ಕೇಂದ್ರಿಯ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿ(ಸಿಎಸ್‌ಎಂಸಿ) ಸಭೆಯಲ್ಲಿ ಇದಕ್ಕೆ ಅನುಮತಿ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರದ ಕಾರ್ಯದರ್ಶಿ ಓಂ ಪ್ರಕಾಶ್ ಬುಧವಾರ(ಜೂ.14) ಅಧಿಸೂಚನೆ ಹೊರಡಿಸಿದ್ದಾರೆ. ಇಡೀ ಕಾಮಗಾರಿಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.
ಈ ಯೋಜನೆಯಡಿ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಚಾಮುಂಡೇಶ್ವರಿ ದೇವಸ್ಥಾನದ ಹೊರ ಆವರಣ, ಮಹಿಷ ವೃತ್ತ, ನಂದಿ ವಿಗ್ರಹ, ವ್ಯೆ ಪಾಯಿಂಟ್ ಸೇರಿದಂತೆ ಬೆಟ್ಟದ ವಿವಿಧ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ.
ದೇವಸ್ಥಾನಕ್ಕೆ ಬರುವ ಭಕ್ತರು ಸರದಿಯಲ್ಲಿ ಸಾಗುವ ಮಾರ್ಗದ (16.73 ಕೋಟಿ ರೂ.) ಮಂಟಪಕ್ಕೆ ದೀಪಾಲಂಕಾರ, ಮಂಟಪದ ಸುತ್ತಲಿನ ಪ್ರದೇಶ, ಶೌಚಗೃಹ, ಪಾದರಕ್ಷೆ ಬಿಡುವ ಸ್ಥಳ ಸ್ಥಾಪಿಸಲು ಉದ್ದೇಶಿಸಲಾಗಿದೆ. ಮಹಿಷ ಪ್ರತಿಮೆ ವೃತ್ತವನ್ನೂ ಅಭಿವೃದ್ಧಿಪಡಿಸಲಾಗುತ್ತಿದ್ದು, ಇಲ್ಲಿ ಕಾರಂಜಿ, ಸ್ವಾಗತ ಕಮಾನು, ಕಲ್ಲಿನ ನಾಮಫಲಕ ಅಳವಡಿಸಿ ದೀಪಾಲಂಕಾರ, ಪೊಲೀಸ್ ಬೂತ್, ಮಾಹಿತಿ ಕೇಂದ್ರ, ಕಂಟ್ರೋಲ್ ರೂಂ, ಆಸನದ ವ್ಯವಸ್ಥೆ, ಕ್ಲಿನಿಕ್, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.
ದೇವಿಕೆರೆಯನ್ನೂ ಅಭಿವೃದ್ಧಿ ಮಾಡುತ್ತಿದ್ದು, ಅಲ್ಲಿ ಕಲ್ಲಿನ ಮಂಟಪ, ಕಲ್ಲಿನ ಪ್ರವೇಶ ದ್ವಾರ, ಪ್ರವೇಶ ಗೇಟ್, ಕೆರೆಯ ಮೆಟ್ಟಿಲು, ಗೋಡೆಯ ಪುನರುಜ್ಜೀವನ, ಶೌಚಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅಲ್ಲದೆ ನಂದಿ ಪ್ರತಿಮೆ ಮತ್ತು ಸುತ್ತಲಿನ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ನಂದಿ ವಿಗ್ರಹದ ಬಳಿ ಬೆಟ್ಟಕ್ಕೆ ತೆರಳುವ ಮೆಟ್ಟಲಿನಲ್ಲಿ ಸರದಿ ಸಾಲಿನ ಮಂಟಪ, ಅದರಲ್ಲಿ ಆಸನದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.
ಬೆಟ್ಟದ ಪಾದ ಪ್ರದೇಶವನ್ನು ಮರುಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ. ಬೆಟ್ಟಕ್ಕೆ ತಲುಪುವ ಮೆಟ್ಟಿಲು ಮಾರ್ಗದ ಎರಡೂ ಬದಿ ರೇಲಿಂಗ್ಸ್ ಹಾಕಲಾಗುತ್ತಿದೆ. ನೀರಿನ ಮಾರ್ಗದಲ್ಲಿ ಜಲಪಾತ ಸಂಪರ್ಕ ಕಲ್ಪಿಸುವುದು, ಬೆಟ್ಟದ ಮೇಲಿರುವ ವ್ಯೆ ಪಾಯಿಂಟ್‌ನಲ್ಲಿ ಮಂಟಪ ನಿರ್ಮಾಣ ಮಾಡಲಾಗುತ್ತಿದ್ದು, ಅದಕ್ಕೆ ಹೊಂದಿಕೊಂಡಂತೆ ಟಿಕೆಟ್ ಕೇಂದ್ರ ತೆರೆಯಲಾಗುತ್ತಿದೆ. ಇಲ್ಲಿಯೂ ಆಸನದ ವ್ಯವಸ್ಥೆ, ರೇಲಿಂಗ್ಸ್, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಗತ್ಯ ಇರುವ ಕಡೆ ಸಿಸಿ ಕ್ಯಾಮರಾ, ಸಾರ್ವಜನಿಕರ ಪ್ರಕಟಣಾ ವ್ಯವಸ್ಥೆ, ಸಾರ್ವಜನಿಕರ ಎಣಿಕೆ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಳ್ಳಲು ಅನುಮೋದನೆ ದೊರೆತಿದೆ.
ಈ ಯೋಜನೆಯನ್ನು ಜಾರಿ ಮಾಡುವ ಏಜೆನ್ಸಿ ರಾಜ್ಯ ಪ್ರವಾಸೋದ್ಯಮ ಇಲಾಖೆಯಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ನೋಡಲ್ ಅಧಿಕಾರಿಯಾಗಿ ಇರಲಿದ್ದು, ಇವರು ಇಡೀ ಯೋಜನೆ ಜಾರಿ ಹಾಗೂ ಮೇಲ್ವಿಚಾರಣೆ ಹೊಣೆಗಾರರೂ ಆಗಿರುತ್ತಾರೆ. ಕೇಂದ್ರೀಯ ನೋಡಲ್ ಸಂಸ್ಥೆ(ಸಿಎನ್‌ಎ) ಅನುಮೋದನೆ ಬಳಿಕ ಈ ಇಲಾಖೆಗೆ 5 ಹಂತದಲ್ಲಿ ಅನುದಾನ ಬಿಡುಗಡೆ ಮಾಡಲಾಗುತ್ತದೆ.