

ಮೈಸೂರು: ಚಾಮುಂಡಿಬೆಟ್ಟದಲ್ಲಿ ಆಯುರ್ವೇದ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಆಗ್ರಹಿಸಿದರು.
ಆಯುರ್ವೇದ ದಿನಾಚರಣೆ ಅಂಗವಾಗಿ ಅರಿವು ಸಂಸ್ಥೆ ವತಿಯಿಂದ ಜಯನಗರದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಆಯುರ್ವೇದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಯುರ್ವೇದ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಋಷಿಮುನಿಗಳು, ಪೂರ್ವಜರು ಪರಿಸರದಲ್ಲಿ ನೈಸರ್ಗಿಕವಾಗಿ ಬೆಳೆದ ಗಿಡಮರಗಳಿಂದ ನೈಸರ್ಗಿಕ ಔಷಧ ಸಿದ್ಧಪಡಿಸುತ್ತಿದ್ದರು. ಆದರೆ, ಇಂದು ಎಲ್ಲವೂ ರಾಸಾಯನಿಕಯುಕ್ತ ಕಲುಷಿತ ಆಹಾರ ಮನುಷ್ಯನ ನೆಮ್ಮದಿ ಹಾಳು ಮಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರೊನಾದಿಂದ ಗುಣಮುಖವಾಗಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ರಾಮಬಾಣವಾಯಿತು. ಆದ್ದರಿಂದ ಈ ಪದ್ಧತಿ ಕುರಿತು ಯುವಪೀಳಿಗೆಯಲ್ಲಿ ಅರಿವು ಮೂಡಿಸಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಬೇಕು. ಇತ್ತೀಚಿನ ದಿನಗಳಲ್ಲಿ ಆಯುರ್ವೇದ ಹೆಸರಿನಲ್ಲಿ ಸರ್ಕಾರದ ಅನುಮತಿ ಪಡೆಯದೇ ಕೆಲ ಕಂಪನಿಗಳು ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಗಜಾನನ ಹೆಗಡೆ ಮಾತನಾಡಿ, ಆಯುರ್ವೇದ ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದೆ. ಇಂದು ವಿಶ್ವದ ಗಮನ ಸೆಳೆದಿದೆ. ಸಹಜ ಬದುಕಿನ ಆಹಾರ ಶೈಲಿಯಲ್ಲಿ ಆಯುರ್ವೇದದ ಚಿಕಿತ್ಸಕ ಅಂಶಗಳಿವೆ. ಇದಕ್ಕೆ ಹೆಚ್ಚು ಒತ್ತು ಕೊಡಬೇಕಿದೆ ಎಂದರು.
ಈ ಹಿಂದೆ ಆಯುರ್ವೇದ ಕಾರಣಕ್ಕೆ ತಾವು ತಿನ್ನುವ ಆಹಾರದಲ್ಲಿ ಔಷಧೀಯ ಗುಣವಿತ್ತು. ಇಂದು ಔಷಧಗಳೇ ಆಹಾರ ಕ್ರಮವಾಗಿ ಇರುವುದು ವಿಪರ್ಯಾಸದ ಸಂಗತಿ. ಆಯುರ್ವೇದದ ಗಿಡಗಳ ಪೋಷಣೆ ಮೂಲಕ ಮಕ್ಕಳಿಗೆ ಚಿಕ್ಕಂದಿನಲ್ಲೇ ಸೊಪ್ಪು ತರಕಾರಿ ಸೇವನೆಗೆ ಉತ್ತೇಜನ ನೀಡಬೇಕು ಎಂದರು.
ಕಾಂಗ್ರೆಸ್ ಮುಖಂಡ ನವೀನ್ ಕುಮಾರ್, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್ ಇನ್ನಿತರರು ಇದ್ದರು.