ಚಾಮುಂಡಿಬೆಟ್ಟದ ನಂದಿಗೆ ಮಹಾಮಜ್ಜನ

4
Published on

ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ಪುರಾತನ ನಂದಿ ವಿಗ್ರಹಕ್ಕೆ ಕಾರ್ತಿಕ ಮಾಸದ ಅಂಗವಾಗಿ 17ನೇ ವರ್ಷದ ಮಹಾಭಿಷೇಕ ಭಾನುವಾರ ನೆರವೇರಿತು.


ಬೆಟ್ಟದ ಬಳಗ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪೂಜಾ ಮಹೋತ್ಸವದಲ್ಲಿ ಖಾದ್ಯ, ಮಧುಪರ್ಕ, ಖರ್ಜೂರ, ಅರಿಶಿಣ, ಕುಂಕುಮ, ಹಾಲು, ತುಪ್ಪ, ಜೇನುತುಪ್ಪ ಮೊದಲಾದ 38 ರೀತಿಯ ವಸ್ತುಗಳಿಂದ ವಿಗ್ರಹಕ್ಕೆ ವೇದಘೋಷಗಳೊಂದಿಗೆ ಅಭಿಷೇಕ ಮಾಡಲಾಯಿತು. ನಂದಿ ವಿಗ್ರಹಕ್ಕೆ ಹೊಂದಿಕೊಂಡಿರುವ ಬೆಟ್ಟದ ರಸ್ತೆ ದುರಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿತ್ತು.


ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸ ಮಠದ ಶ್ರೀ ಚಿದಾನಂದ ಸ್ವಾಮೀಜಿ ನಂದಿಯ ಮಹಾಮಜ್ಜನಕ್ಕೆ ಚಾಲನೆ ನೀಡಿದರು. ನಂತರ ಹಾಲು, ಮೊಸರು ಹಾಗೂ ಭಸ್ಮಗಳಿಂದ ಅಭಿಷೇಕ ಮಾಡುತ್ತಿದ್ದಂತೆ ಕಪ್ಪು ಶಿಲಾನಂದಿ ವಿಗ್ರಹ ಅಕ್ಷರಶಃ ಶ್ವೇತವರ್ಣಕ್ಕೆ ಬದಲಾದರೆ, ಅರಿಶಿಣ ಹಾಗೂ ಚಂದನದ ಅಭಿಷೇಕದ ಸಮಯದಲ್ಲಿ ವಿಗ್ರಹ ಹಳದಿ ಬಣ್ಣಕ್ಕೆ ತಿರುಗಿತು. ಕುಂಕುಮದ ಅಭಿಷೇಕದಲ್ಲಿ ವಿಗ್ರಹ ಕೆಂಪು ಬಣ್ಣಕ್ಕೆ ತಿರುಗಿದ್ದನ್ನು ಕಂಡು ಜನರು ಸಂತಸಗೊಂಡರು.


ಎಳನೀರು, ಜೇನುತುಪ್ಪ, ಕಬ್ಬಿನ ಹಾಲು, ದ್ರಾಕ್ಷಾರಸ, ಪಂಚಾಮೃತ, ಬಾಳೆಹಣ್ಣು, ಸೌತೆಕಾಯಿ ಅಭಿಷೇಕದ ನಂತರ ಸುವರ್ಣದ ಅಭಿಷೇಕ ಎಂದು ನಾಣ್ಯಗಳಿಂದ ನಂದಿಗೆ ಅಭಿಷೇಕ ಮಾಡಿದಾಗ ಚಿಮ್ಮಿದ ನಾಣ್ಯಗಳನ್ನು ಭಕ್ತಾದಿಗಳು ಕೈಯಲ್ಲಿ ಹಿಡಿದು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net