ಚಾಮುಂಡಿಬೆಟ್ಟ ಹಿಂದುಗಳ ಆಸ್ತಿ; ಡಿಕೆಶಿ ಹೇಳಿಕೆ ಆಘಾತಕಾರಿ, ಹಾಸ್ಯಾಸ್ಪದ: ಸಂಸದ ಯದುವೀರ್  ತಿರುಗೇಟು

yaduveer
Published on

ಮೈಸೂರು: ಚಾಮುಂಡಿಬೆಟ್ಟ, ದೇಗುಲ ಹಿಂದುಗಳ ಆಸ್ತಿ. ಇದರಲ್ಲಿ ಎರಡು ಮಾತಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿರುಗೇಟು ನೀಡಿದ್ದಾರೆ.

‘ಚಾಮುಂಡಿಬೆಟ್ಟ ಹಿಂದುಗಳ ಆಸ್ತಿಯಲ್ಲ’ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಆಘಾತಕಾರಿ ಹಾಗೂ ಹಾಸ್ಯಾಸ್ಪದ ಹೇಳಿಕೆ. ಗೌರಿ ವಿನಾಯಕನ ಪೂಜೆಯ ಸಂದರ್ಭದಲ್ಲಿ ಈ ರೀತಿ ಹೇಳಿಕೆ ಖಂಡನೀಯ ಎಂದು ಕುಟುಕಿದರು.

ಮಾರ್ಕಂಡೇಯರು ತಪಸ್ಸು ಮಾಡಿರುವ ಇತಿಹಾಸವಿರುವ ಸ್ಥಳವಿದು. ಚಾಮುಂಡಿ ಬೆಟ್ಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆ ಸಂದರ್ಭದಲ್ಲಿ ಬೇರೆ ಧರ್ಮಗಳೇ ಇರಲಿಲ್ಲ. ಬೌದ್ಧ ಧರ್ಮ ಒಂದೇ ಆಗ ಇದ್ದಿದ್ದು. ನಮ್ಮ ಧರ್ಮದ ದುರ್ಬಳಕೆ ಮಾಡಿಕೊಳ್ಳಬಾರದು. ನಮ್ಮ ಧಾರ್ಮಿಕ ಕ್ಷೇತ್ರಗಳಿಗೆ ಎಲ್ಲರಿಗೂ ಪ್ರವೇಶ ಇದೆ. ಆದರೆ, ಪ್ರವೇಶ ಇದೆ ಅನ್ನೋ ಕಾರಣಕ್ಕೆ ಅವರದ್ದು ಅನ್ನುವುದು ಸರಿಯಲ್ಲ ಎಂದು ಹೇಳಿದರು.

ಜಾತ್ಯತೀತ ಧರ್ಮದ ದೃಷ್ಟಿಯಿಂದ ನೋಡಬಹುದು ಅಷ್ಟೆ. ಇದು ಧಾರ್ಮಿಕ ಕೇಂದ್ರ. ಕೋಟ್ಯಂತರ ಜನರ ಭಾವನೆಗೆ ಇದರಿಂದ ಧಕ್ಕೆಯಾಗುತ್ತದೆ. ಈ ರೀತಿ ಬೇಜವಾಬ್ದಾರಿತನದ ಹೇಳಿಕೆ ನೀಡಬಾರದು ಎಂದು ಡಿಸಿಎಂ ವಿರುದ್ಧ ಹರಿಹಾಯ್ದರು.

ಸರ್ಕಾರವು ಬೆಟ್ಟವನ್ನು ನಿಯಂತ್ರಣಕ್ಕೆ ತೆಗದುಕೊಳ್ಳಲು ಮುಂದಾಗಿದೆ. ಬರೀ ಹಿಂದು ದೇವಾಲಯಗಳನ್ನು ಗುರಿಯಾಗಿಟ್ಟುಕೊಂಡು ಈ ರೀತಿ ಮಾಡುತ್ತಿದೆ. ಹಿಂದುಗಳ ಸ್ಥಳಗಳಲ್ಲಿ ಈ ರೀತಿ ಆಗುತ್ತಿದೆ. ಆರ್‌ಎಸ್‌ಎಸ್ ಗೀತೆ ಹಾಡಿ ಅದರ ಬಗ್ಗೆ ಗೊತ್ತಿದೆ ಅಂದರು. ಪಕ್ಷದಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಷಮೆ ಕೇಳಿದರು. ಅದನ್ನು ಬ್ಯಾಲೆನ್ಸ್ ಮಾಡಲು ಈ ರೀತಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಗಂಭೀರ ಸಮಸ್ಯೆ ಇರುವಾಗ ಈ ರೀತಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಾರೆ. ಇದು ಈ ಹಿಂದೆಯೂ ಈ ರೀತಿ ಆಗಿದೆ ಎಂದರು.

ಧರ್ಮದ ವಿಚಾರ ಬಂದಾಗ ನಾವು ಯಾವುದೇ ಹೋರಾಟಕ್ಕೂ ಸಿದ್ಧ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು. ಚಾಮುಂಡಿಬೆಟ್ಟ ಪ್ರಾಧಿಕಾರ ಆಗಬಾರದು. ಪ್ರಾಧಿಕಾರ ಆದರೆ ಅದನ್ನು ಪ್ರವಾಸೋದ್ಯಮ ಕೇಂದ್ರ ಮಾಡುತ್ತಾರೆ. ಚಾಮುಂಡಿ ಬೆಟ್ಟ ಧಾರ್ಮಿಕ ಕೇಂದ್ರವಾಗಿಯೇ ಇರಬೇಕು ಎಂದೂ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net