

ಗೋಣಿಕೊಪ್ಪ: ದೇವಣಗೇರಿ ತಲಕಟಕೇರಿ ಗ್ರಾಮದಲ್ಲಿ ಪುಗ್ಗೇರ ಕುಟುಂಬದ ಚಾಮುಂಡಿ ದೇವರ ಮರು ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ ಶ್ರದ್ಧಾ-ಭಕ್ತಿಯಿಂದ ನಡೆಯಿತು.
ಕುಟುಂಬದ ಹಿರಿಯ ಪುಗ್ಗೇರ ಪಿ.ಪೊನ್ನಪ್ಪ ಮಾತನಾಡಿ, ಹಿಂದೆ ಪುಗ್ಗೇರ ಕುಟುಂಬದ ಹಿರಿಯರ ಮೇಲೆ ಪಾಳೇಗಾರರು ಆಕ್ರಮಣಕ್ಕೆ ಮುಂದಾಗಿದ್ದರು. ಕುಟುಂಬಕ್ಕೆ ಸೇರಿದ ಆಸ್ತಿ, ಸಂಪನ್ಮೂಲ ನೀಡುವಂತೆಯೂ, ಹೋರಾಟಕ್ಕೆ ಬರುವಂತೆಯೂ ತಾಕೀತು ಮಾಡಿದ ಸಂದರ್ಭ ನಮ್ಮ ಹಿರಿಯ ವ್ಯಕ್ತಿ ಬೈತೂರು ದೇವರ ಮೊರೆ ಹೋಗಿದ್ದರು. ಆಗ ಬೈತೂರು ದೇವರು ರಕ್ಷಣೆಗೆ ಚಾಮುಂಡಿಯನ್ನು ಕಳುಹಿಸಿತ್ತು. ಅದರಂತೆ ನಾವು ಚಾಮುಂಡಿಯನ್ನು ಇಂದಿಗೂ ಪೂಜಿಸುತ್ತಿದ್ದೇವೆ. ಮರು ಪ್ರತಿಷ್ಠಾಪನೆ ಮೂಲಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದರು.
ಕುಟುಂಬ ಅಧ್ಯಕ್ಷ ನಂದಾ ಸುಬ್ಬಯ್ಯ, ಹಿರಿಯರಾದ ಅಕ್ಕವ್ವ ಅಪ್ಪಚ್ಚು, ಗಂಗವ್ವ ಉತ್ತಪ್ಪ, ಪುಗ್ಗೇರ ಮಣಿ, ರಂಜಿ ದೇವಯ್ಯ, ರಾಣಾ ಕಾರ್ಯಪ್ಪ, ಶುಭ ದೇವಯ್ಯ, ಕಿಟ್ಟು ವಿಜು ನಂಜುಂಡ, ಪ್ರಕಾಶ್ ಇತರರಿದ್ದರು.