ಚಾಮರಾಜನಗರ ಅಭಿವೃದ್ಧಿಗೆ 1500 ಕೋಟಿ ರೂ.

ಯಳಂದೂರು ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 107ನೇ ಜಯಂತಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿವದೀಕ್ಷೆ-ಲಿಂಗದೀಕ್ಷೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಸಿದ್ಧಗಂಗಾ, ಸುತ್ತೂರು ಶ್ರೀ ಸೇರಿದಂತೆ ಅನೇಕರು ಇದ್ದರು.
15 yelandur 01
Published on

ಯಳಂದೂರು: ಚಾಮರಾಜನಗರ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲ ತಾಲೂಕುಗಳ ಅಭಿವೃದ್ಧಿಗೆ 1500 ಕೋಟಿ ರೂ. ವಿಶೇಷ ಯೋಜನೆ ತಯಾರಾಗಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.


ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಂಗಳವಾರ ಮೈಸೂರು-ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ ವತಿಯಿಂದ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 107ನೇ ಜಯಂತಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಿವದೀಕ್ಷೆ-ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಜಿಲ್ಲಾ ಕೇಂದ್ರಕ್ಕೆ ಮುಖ್ಯಮಂತ್ರಿಗಳನ್ನು ಈ ತಿಂಗಳ ಅಂತ್ಯ ಅಥವಾ ಡಿ.2ರಂದು ಕರೆತರಲಾಗುವುದು. ಚಾಮರಾಜನಗರ ಜಿಲ್ಲೆ ಅತ್ಯಂತ ಹಿಂದುಳಿದಿದ್ದು, ಇದರ ಅಭಿವೃದ್ಧಿಗೆ ವಿಶೇಷ ಯೋಜನೆ ಸಿದ್ಧವಾಗಿದೆ. ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ, ಹನೂರಿಗೆ ತೆರಳಿ ಅಲ್ಲಿಂದ ನೇರವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಮಾಡಿ ಪ್ರಾಧಿಕಾರದ ಸಭೆ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.


ರಾಜೇಂದ್ರ ಶ್ರೀಗಳು ಮಾತೃಹೃದಯಿಯಾಗಿದ್ದರು. ಸಾವಿರಾರು ವರ್ಷಗಳ ಐತಿಹ್ಯ ಹೊಂದಿರುವ ಸುತ್ತೂರು ಮಠ ವಿಶ್ವದಲ್ಲೇ ಅಪಾರ ಕೀರ್ತಿ ಪಡೆದುಕೊಂಡಿದೆ. ಇದರ ಹಿಂದೆ ರಾಜೇಂದ್ರ ಹಾಗೂ ಹಾಲಿ ಇರುವ ಸುತ್ತೂರು ಶ್ರೀಗಳ ಕೊಡುಗೆ ಅಪಾರವಾಗಿದೆ. ಮಠಮಾನ್ಯಗಳು ರಾಷ್ಟ್ರದ ಸಂಪತ್ತಾಗಿದ್ದು, ಸಮಾಜದ ಅಂಕುಡೊಂಕು ತಿದ್ದುವ, ಅಧ್ಯಾತ್ಮ ಪಸರಿಸುವ, ನಮ್ಮ ಸಂಸ್ಕೃತಿ, ಶ್ರೀಮಂತ ಪರಂಪರೆಯನ್ನು ಜಗಕ್ಕೆ ಸಾರುವ, ಸಂಸ್ಕಾರ ಕಲಿಸುವ ಕೇಂದ್ರಗಳಾಗಿವೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ 55 ಜನರಿಗೆ ಶಿವದೀಕ್ಷೆ-ಲಿಂಗದೀಕ್ಷೆ ಹಾಗೂ 55 ವಿದ್ಯಾರ್ಥಿಗಳಿಗೆ ವಿವಿಧ ದತ್ತಿಗಳಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net