

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಇ-ಖಾತಾ ಅಭಿಯಾನಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.
ಒಂಟಿಕೊಪ್ಪಲಿನ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಮನೆ, ನಿವೇಶನ ಮಾಲೀಕರಿಗೆ ಇ-ಖಾತಾ ಪತ್ರವನ್ನು ಶಾಸಕ ಕೆ.ಹರೀಶ್‌ಗೌಡ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಪಾಲಿಕೆಯ ವತಿಯಿಂದ ಇ ಖಾತಾ ಮಾಡುವುದನ್ನು ಸರಳಗೊಳಿಸಿದ್ದು, ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕ್ಷೇತ್ರದ ವ್ಯಾಪ್ತಿಯ ಇತರ ವಲಯ ಕಚೇರಿಯ ವ್ಯಾಪ್ತಿಯಲ್ಲೂ ಸಾಮೂಹಿಕವಾಗಿ ಇ ಖಾತಾ ವಿತರಿಸಲು ಉದ್ದೇಶಿಸಿದ್ದು, ಸಾರ್ವಜನಿಕರು ಅರ್ಜಿ ಸಲ್ಲಿಸಿ ತಮ್ಮ ಆಸ್ತಿ ರಕ್ಷಿಸಿಕೊಳ್ಳಬೇಕು ಎಂದು ಕೋರಿದರು.
ಆಸ್ತಿಯನ್ನು ಬೇರೆ ಯಾರಿಗೂ ಮಾರಾಟ ಮಾಡಲಾಗದಂತೆ ಕಾವೇರಿ ತಂತ್ರಾಂಶಕ್ಕೆ ಜೋಡಣೆ ಮಾಡಲಾಗಿದೆ. ನಿಮ್ಮ ಆಸ್ತಿ ಸುರಕ್ಷತೆ ಕಲ್ಪಿಸಲಾಗಿದೆ ಎಂದರು.
ಮಧ್ಯವರ್ತಿಗಳ ಮೂಲಕ ಖಾತೆ ಮಾಡಿಸಿಕೊಳ್ಳಲು ಯಾರು ಮುಂದಾಗಬಾರದು. ನೇರವಾಗಿ ಹೋಗಿ ದಾಖಲೆ ಸಹಿತ ಅರ್ಜಿ ಸಲ್ಲಿಸಿದರೆ 7 ದಿನಕ್ಕೆ ಇ ಖಾತಾ ದೊರೆಯುತ್ತದೆ ಎಂದು ತಿಳಿಸಿದರು
ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ವಲಯ ಕಚೇರಿ 6ರ ಉಪ ಆಯುಕ್ತೆ ಪ್ರತಿಭಾ, ಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ.ನಾಗಭೂಷಣ್, ಬಾಲರಾಜ್, ಭಾಗ್ಯ ಮಹದೇಶ್, ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನಕೊಪ್ಪಲು, ಮಹಿಳಾ ಅಧ್ಯಕ್ಷೆ ಸುಶೀಲಾ ಮರಿಗೌಡ, ಮುಖಂಡರಾದ ಡೆಲ್ಲಿ ರವಿ, ಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.