

ಬಳ್ಳಾರಿ : ಇಲ್ಲಿನ ಹೊಸ ಬಸ್ ನಿಲ್ದಾಣ ಮುಂಭಾಗದಲ್ಲಿನ ಶ್ರೀ ಅವಧೂತ ಬಾಲಾಂಜನೇಯ ಸ್ವಾಮಿ ಮಠದಲ್ಲಿ ದಿವ್ಯಕ್ಷೇತ್ರ ಹರಿಹರಪುರದ ಪರಮಪೂಜ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಅವರು ಗುರುಮಂಡಲ ಪೂಜೆ ನೆರವೇರಿಸಿ, ಚಾತುರ್ಮಾಸ್ಯ ದೀಕ್ಷೆ ಪಡೆದರು. ಈ ಕ್ರೋಧಿ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತವು ಪರಮಪೂಜ್ಯ ಶ್ರೀ ಬಾಲಾನಂದ ಸ್ವಾಮೀಜಿ ಗೌರವ ಅಧ್ಯಕ್ಷತೆಯಲ್ಲಿ ಆಚರಿಸಿದರು. ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಸಾವಿರಾರು ಭಕ್ತ ಶಿಷ್ಯರ ಸಮಕ್ಷಮದಲ್ಲಿ ಗುರು ಮಂಡಲ ಪೂಜೆ ನೆರವೇರಿಸಿದರು. ಬಳಿಕ ಕುಂಕುಮ ಅರ್ಚನೆ ಹಾಗೂ ಸಂಜಾವೋರಣ ಪೂಜೆ ಜರುಗಿದವು. ಈ ಒಂದು ವಿಶೇಷವಾದ ಪೂಜೆಯ ಅಪರೂಪವಾದ ಸಂದರ್ಭದಲ್ಲಿ ಸೇವೆಯಿಂದ ಪಡೆದ ವ್ಯಾಸ ಅಕ್ಷತೆಯನ್ನು ಸೋಮವಾರ ಭಕ್ತರಿಗೆ ಅನುಗ್ರಹಿಸಲಿದ್ದಾರೆ. ಶಾರದಮ್ಮ ದೇವಿಗೆ ಪಾದಕು ಪೂಜೆ, ಗುರು ಪೂಜೆ ಇಂದಿನಿಂದ ನಿತ್ಯ ನಡೆಯಲಿದೆ. ಈ ವ್ರತಾಚರಣೆಯಲ್ಲಿ ಸಹಸ್ರಾರು ಭಕ್ತರು ಸೇರಲಿದ್ದಾರೆ. ಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ಯತಿಗಳ ಸೇವೆಯನ್ನು ಮಾಡುವುದು ಗೃಹಸ್ಥರ ಕರ್ತವ್ಯವಾಗಿದೆ. ಈ ಪವಿತ್ರ ಸೇವೆಯು ಗೃಹಸ್ಥರ ಸಮಸ್ತ ಪಾಪಗಳನ್ನು ಕಳೆದು ಅವರಿಗೆ ಸಕಲ ಮಂಗಳವನ್ನುಂಟು ಮಾಡಲಾಗುವುದು. ಈ ಚಾತುರ್ಮಾಸ್ಯದ ವ್ರತಾಚರಣೆಯು ಈ ಸಂವತ್ಸರದಲ್ಲಿ ಎರಡು ತಿಂಗಳ ಕಾಲ ನಡೆಯಲಿದ್ದು, ಪ್ರತಿ ನಿತ್ಯವೂ ಅನ್ನದಾನ, ಶ್ರೀಮಠದ ಆರಾಧ್ಯ ದೇವರಾದ, ಅಗಸ್ಯ ಮಹರ್ಷಿ ಕರಾರ್ಚಿತ ಶ್ರೀಲಕ್ಷ್ಮೀನರಸಿಂಹ ಸ್ವಾಮೀಜಿಗೆ ನಿತ್ಯ ಕಲ್ಯಾಣೋತ್ಸವ ಸೇವೆ ಹಾಗೂ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ, ಸ್ವಾಮೀಜಿಗಳ ಆರ್ಶಿವಾಚನ ಪಡೆದು ಪುನೀತರಾದರು. ಶನಿವಾರ ಸಂಜೆ ನಗರದ ಗಡಗಿ ಚೆನ್ನಪ್ಪ ವೃತ್ತದಿಂದ ಬಾಲಾಂಜನೇಯ ದೇವಸ್ಥಾನದವರೆಗೆ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮೀಜಿಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರರು ಮಹಿಳೆಯರು ಭಾಗವಹಿಸಿದ್ದರು. ವಿವಿಧ ಕಲಾ ತಂಡಗಳು ಡೊಳ್ಳು ಬಾರಿಸುವುದು, ನೃತ್ಯ ಪ್ರದರ್ಶನ ಜರುಗಿದವು.
=====