

ಮೈಸೂರು: ವಿದ್ಯಾನಗರದಲ್ಲಿ ಶನಿವಾರ ರಾತ್ರಿ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ವಿದ್ಯಾನಗರ 4ನೇ ಕ್ರಾಸ್ ನಿವಾಸಿ ಬಾಲರಾಜ್(28) ಕೊಲೆಯಾದ ಯುವಕ. ಅದೇ ಬಡಾವಣೆಯ ನಿವಾಸಿಗಳಾದ ತೇಜಸ್, ಸಂಜಯ್, ಕಿರಣ್, ಸಾಮ್ರಾಟ್ ಎಂಬುವರು ಬಾಲರಾಜ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಣ್ಣ ವಿಷಯಕ್ಕೆ ಸ್ನೇಹಿತರ ನಡುವೆ ಗಲಾಟೆ ಶುರುವಾಗಿದೆ. ಬಾಲರಾಜ್ ಮನೆ ಮುಂದೆ ಬಂದು ನಾಲ್ವರು ಜಗಳ ತೆಗೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಬಾಲರಾಜ್‌ನ ತಂದೆ ಜಗಳ ಬಿಡಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಚಾಕುವಿನಿಂದ ಬಾಲರಾಜ್‌ಗೆ ಇರಿದು ಪರಾರಿಯಾಗಿದ್ದು, ಬಾಲರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲರಾಜ್ ಮೈಸೂರು ರೇಸ್‌ಕೋರ್ಸ್‌ನ ಬುಕ್ಕಿಯ ಜತೆ ಕೆಲಸ ಮಾಡುತ್ತಿದ್ದ. ಈತ ಮತ್ತು 4 ಜನ ಆರೋಪಿಗಳು ಚಿಕ್ಕ ವಯಸ್ಸಿನಿಂದಲೇ ಗೆಳೆಯರು, ಒಂದೇ ಬೀದಿಯಲ್ಲಿ ವಾಸವಾಗಿದ್ದರು.
ನಜರ್‌ಬಾದ್ ಠಾಣೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ.